ದೇಶ

ಎನ್ ಡಿಎ ಸರ್ಕಾರ 'ವಿಳಂಬ' ಕಾರ್ಯ ಸಂಸ್ಕೃತಿಯನ್ನು ಬದಲಿಸಿದೆ: ಪ್ರಧಾನಿ ಮೋದಿ

Lingaraj Badiger
ಅಸ್ಸಾಂ: ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ಎನ್ ಡಿಎ ಸರ್ಕಾರ 'ವಿಳಂಬ' ಕಾರ್ಯ ಸಂಸ್ಕೃತಿಯನ್ನು ಬದಲಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಅಸ್ಸಾಂನಲ್ಲಿ ದೇಶದ ಅತಿ ಉದ್ದದ (4.9 ಕಿ.ಮೀ) ರೈಲು ಮತ್ತು ರಸ್ತೆ ಸೇತುವೆಯನ್ನು ಉದ್ಘಾಟಿಸಿದ ಬಳಿಕ ಕರೆಂಗ್ ಚೋಪ್ರಿಯಲ್ಲಿ ರ್ಯಾಲಿಯನ್ನು ಉದ್ದೇಶಿ ಮಾತನಾಡಿದ ಪ್ರಧಾನಿ, ಅಭಿವೃದ್ಧಿ ಯೋಜನೆಗಳನ್ನು ನಿಗದಿತ ಅವಧಿಯಲ್ಲೇ ಪೂರ್ಣಗೊಳಿಸಬೇಕು. ಅದು ಕೇವಲ ಪೇಪರ್ ಗೆ ಸೀಮಿತವಾಗಬಾರದು. ಜಾರಿಯಾಗಬೇಕು ಎಂದರು.
ನಾವು ಈ ಮುಂಚಿನ 'ವಿಳಂಬ'  ಕಾರ್ಯ ಸಂಸ್ಕೃತಿಯನ್ನು ಬದಲಿಸಿದ್ದೇವೆ. ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುತ್ತಿದ್ದೇವೆ ಎಂದು ಪರೋಕ್ಷವಾಗಿ ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಒಂದು ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿದ್ದರೆ ಬೋಗಿಬೀಲ್ ಸೇತುವೆ 2008-09ರಲ್ಲೇ ಸಿದ್ಧವಾಗುತ್ತಿತ್ತು. ಅವರು ಅಧಿಕಾರ ಕಳೆದುಕೊಂಡ ನಂತರ 2014ರ ವರೆಗೂ ಈ ಯೋಜನೆ ಬಗ್ಗೆ ಗಮನ ನೀಡಲಿಲ್ಲ ಎಂದು ಪ್ರಧಾನಿ ಹೇಳಿದರು.
ಬೋಗಿಬೀಲ್ ಸೇತುವೆ ಕೇವಲ ಒಂದು ಸೇತುವೆ ಅಲ್ಲ. ಅದು ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಜನರ ಜೀವನಾಡಿಯಾಗಲಿದೆ. ಈ ಸೇತುವೆ ಅಸ್ಸಾಂನಿಂದ ಅರುಣಾಚಲ ಪ್ರದೇಶದ ನಹರ್ ಲಗೂನ್ ನ 700 ಕಿ.ಮೀ.ದೂರವನ್ನು ಕೇವಲ 200 ಕಿ.ಮೀ.ಗೆ ಇಳಿಸಿದೆ ಎಂದರು.
SCROLL FOR NEXT