ದೇಶ

ತಮಿಳುನಾಡಿನಲ್ಲಿ ಎರಡನೇ ಪ್ರಕರಣ: ಮಹಿಳೆಗೆ ಎಚ್ಐವಿ ಸೋಂಕಿತ ರಕ್ತ ವರ್ಗಾವಣೆ!

Raghavendra Adiga
ಚೆನ್ನೈ: ತಮಿಳುನಾಡು ಆಸ್ಪತ್ರೆಯಲ್ಲಿ ದೋಷಯುಕ್ತ ವೈದ್ಯಕೀಯ ಪ್ರಕ್ರಿಯೆಯ ಕಾರಣ ಗರ್ಭಿಣಿ ಮಹಿಳೆಗೆ ಎಚ್ಐವಿ ಸೋಂಕು ಹರಡಿದ್ದ ಪ್ರಕರಣ ನಡೆದು ಎರಡು ದಿನಗಳ ಬಳಿಕ, ಇದೇ ರೀತಿಯ ಪ್ರಕರಣ ಒಂದು ಚೆನ್ನೈನಲ್ಲಿ ಸಹ ನಡೆದಿದ್ದು ಬೆಳಕಿಗೆ ಬಂದಿದೆ.  ವೈದ್ಯರ ನಿರ್ಲಕ್ಷದಿಂದ 27ರ ಹರೆಯದ ಮಹಿಳೆಗೆ ಮಾರಕ ಏಡ್ಸ್ ಸೋಂಕು ತಗುಲಿದೆ ಎಂದು ಆಕೆ ಆರೋಪಿಸಿದ್ದಾರೆ. ಚೆನ್ನೈನ ಕಿಲ್ಪೌಕ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಏಪ್ರಿಲ್ ತಿಂಗಳಲ್ಲಿ ರಕ್ತ ವರ್ಗಾವಣೆ ಮಾಡಿಕೊಂಡ ಸಮಯದಲ್ಲಿ ಆಕೆಗೆ ಎಚ್ಐವಿ ಸೋಂಕಿತ ರಕ್ತ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆದರೆ ಆಸ್ಪತ್ರೆ ಅಧಿಕಾರಿಗಳು ಮಾತ್ರ ಮಹಿಳೆಯ ಆರೋಪ ಅಲ್ಲಗಳೆದಿದ್ದು ಆಕೆ ಬೇರಾವುದೇ ಕಾರಣದಿಂದಾಗಿ ಏಡ್ಸ್ ಗೆ ತುತ್ತಾಗಿರಬಹುದು ಎಂದಿದ್ದಾರೆ.
ತಾನು ಗರ್ಭಿಣಿಯಾಗಿದ್ದ ಸಮಯದಲ್ಲಿ ಚೆನ್ನೈ ಹೊರವಲಯದ ಕಲ್ಪುಕ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದೆ. ನನ್ನ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕುಸಿದ ಕಾರಣ ರಕ್ತವನ್ನು ನೀಡಲಾಗಿತ್ತು.ಈ ವೇಳೆ ಇಬ್ಬರು ಪ್ರತ್ಯೇಕ ದಾನಿಗಳ ರಕ್ತವನ್ನು ನನಗೆ ನೀಡಿದ್ದರು ಎಂದು ಮಹಿಳೆ ಹೇಳಿದ್ದಾರೆ. 
ಆದರೆ ಮಹಿಳೆಗೆ ಎಚ್ಐವಿ ಪಾಸಿಟಿವ್  ಎಂದು ಕಂಡುಬಂದಾಗ ಆಸ್ಪತ್ರೆ ವೈದ್ಯರು ತಾವು ದಾನಿಗಳಿಂದ ರಕ್ತ ಪಡೆವ ಮೊದಲು ಹಾಗೂ ನಂತರ ಎರಡೂ ಬಾರಿ ವೈರಸ್ ಪರೀಕ್ಷೆ ನಡೆಸಿದ್ದೆವು, ಆ ಪರೀಕ್ಷೆಗಳಲ್ಲಿ ವೈರಸ್ ಇರುವುದು ಪತ್ತೆಯಾಗಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಮಹಿಳೆ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸೋಂಕು ಇತ್ತೆ ಎನ್ನುವುದು ಸಹ ತಿಳಿದಿಲ್ಲ, ಆಕೆ ತಾನು  ಅಗತ್ಯ ಪರೀಕ್ಷೆ ಒಳಗಾಗಿರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಇದಕ್ಕೆ ಮುನ್ನ ತಮಿಳುನಾಡಿನ ವಿರುಧುಯ್ನಗರ್ ಜಿಲ್ಲೆ ಸತ್ತೂರ್ ನಲ್ಲಿನ ಮಹಿಳೆಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದ ಸೋಂಕಿತ ರಕ್ತ ವರ್ಗಾವಣೆಯಾಗಿ ಎಚ್ಐವಿ ಸೋಂಕು ಕಾಣಿಸಿತ್ತು. ಹದಿಹರೆಯದ ಬಾಲಕನೊಬ್ಬನಿಂದ ರಕ್ತ ಪಡೆಇದ್ದ ಆ ಮಹಿಳೆ ರೋಗವನ್ನು ದೃಢಪಡಿಸುತ್ತಿದ್ದಂತೆ ರಕ್ತ ನೀಡಿದ್ದ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದನು.
SCROLL FOR NEXT