ಪ್ರಧಾನ ಮಂತ್ರಿ ನರೇಂದ್ರ ಮೋದಿ
ಮುಂಬೈ: ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿರುವುದು ನಿನ್ನೆ ಮಂಡಿಸಲಾದ ಕೇಂದ್ರ ಬಜೆಟ್ ನಲ್ಲಿ ಸ್ಪಷ್ಟವಾಗುತ್ತಿದೆ ಎಂದು ಶಿವಸೇನೆ ಟೀಕಿಸಿದೆ.
ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ಗ್ರಾಮೀಣ ಭಾಗದ ಜನತೆ ಬಿಜೆಪಿ ಕಡೆ ಒಲವನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ತೋರಿಸಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣ ಭಾಗದ ಜನತೆಗೆ ಕೆಲವು ಯೋಜನೆಗಳನ್ನು ಪ್ರಕಟಿಸಿದೆ ಎಂದು ಹೇಳಿದೆ.
ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯ ಪುಟದಲ್ಲಿ ಇಂದು ಬರೆದುಕೊಂಡಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿಯವರು ನಿನ್ನೆ ಮಂಡಿಸಿರುವ ಬಜೆಟ್ ನಲ್ಲಿ ತಮ್ಮ ಹಳೆಯ ಯೋಜನೆಗಳನ್ನೇ ಮರು ಪ್ರಕಟಿಸಿದ್ದಾರೆ ಎಂದು ಆರೋಪಿಸಿದೆ.
ದೇಶದ ಜನತೆಯ ಮುಂದೆ ಕನಸುಗಳನ್ನು ಮಾರಾಟ ಮಾಡಿ ಅಧಿಕಾರಕ್ಕೆ ಬಂದ ಎನ್ ಡಿಎ ಸರ್ಕಾರ ಮತ್ತೊಮ್ಮೆ ಜನರಿಗೆ ಕನಸುಗಳ ಜಟಿಲ ಮಾರ್ಗಗಳನ್ನು ನೀಡಿದೆ. ಹಣಕಾಸು ಸಚಿವರು ಮಂಡಿಸಿರುವ ಬಜೆಟ್ ನಲ್ಲಿ ಹಳೆಯ ಕನಸುಗಳು ಮತ್ತು ಹಳೆಯ ಘೋಷಣೆಗಳ ಮೂಟೆಗಳಿವೆ. ಅವರ ನಿನ್ನೆಯ ಇಡೀ ಭಾಷಣ ಕನಸುಗಳಿಂದ ಕೂಡಿತ್ತು ಎಂದು ಶಿವಸೇನೆ ಹೇಳಿದೆ.
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ದೇಶದ ಆರ್ಥಿಕತೆ ಕುಸಿಯುತ್ತಿದ್ದು ಸರ್ಕಾರದ ಯೋಜನೆಗಳು ಮತ್ತಷ್ಟು ದುರ್ಬಲಗೊಂಡಿದೆ. ಅದು ಹಣಕಾಸು ಸಚಿವರ ಬಜೆಟ್ ಭಾಷಣದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು ಎಂದಿದೆ.
ದೇಶದ ಸಾಮಾನ್ಯ ಜನರಿಗೆ ವಿತ್ತೀಯ ಕೊರತೆ, ಆಮದು, ರಫ್ತು ಹಣದುಬ್ಬರವೆಂದರೇನೆಂದು ಅರ್ಥವಾಗುವುದಿಲ್ಲ.ಬಜೆಟ್ ಘೋಷಣೆ ನಂತರ ವಸ್ತುಗಳ ಬೆಲೆಗಳೆಲ್ಲ ಕಡಿಮೆಯಾಗಿವೆಯೇ, ನಿತ್ಯ ಜನಜೀವನಕ್ಕೆ ಉಪಯೋಗವಾಗಿದೆಯೇ ಎಂದು ತಿಳಿದುಕೊಳ್ಳಲು ಬಯಸುತ್ತಾರೆ ಎಂದು ಶಿವಸೇನೆ ಅಭಿಪ್ರಾಯ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos