ದೇಶ

ಹೈದರಾಬಾದ್: ಸ್ಕೂಲ್‌ ಫೀ ಕಟ್ಟದ್ದಕ್ಕೆ ಅವಮಾನ, ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

Lingaraj Badiger
ಹೈದರಾಬಾದ್‌: ಶಾಲಾ ಶುಲ್ಕ ಪಾವತಿಸದ ಕಾರಣ ಪರೀಕ್ಷೆ ಬರೆಯಲು ಖಾಸಗಿ ಶಾಲಾ ಆಡಳಿತ ಮಂಡಳಿ ನಿರಾಕರಿಸಿದ್ದು, ಇದರಿಂದ ನೊಂದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ ಗುರುವಾರ ಹೈದರಾಬಾದ್ ನಲ್ಲಿ ನಡೆದಿದೆ.
ಮಲ್ಕಾಜ್‌ಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆಎಲ್ ಎಸ್ ನಗರದಲ್ಲಿ ಈ ಘಟನೆ ನಡೆದಿದ್ದು, ಜ್ಯೋತಿ ಹೈಸ್ಕೂಲ್‌ ಸಿಬ್ಬಂದಿ ಶಾಲಾ ಶುಲ್ಕ ಪಾವತಿಸಿಲ್ಲವೆಂದು ಸಹಪಾಠಿಗಳ ಎದುರು 9ನೇ ತರಗತಿ ವಿದ್ಯಾರ್ಥಿನಿ ಸಾಯಿ ದೀಪ್ತಿಗೆ ಅವಮಾನ ಮಾಡಿದ್ದು, ಇದರಿಂದ ಬೇಸತ್ತ ವಿದ್ಯಾರ್ಥಿನಿ ‘ಅಮ್ಮಾ, ನನ್ನನ್ನು ಕ್ಷಮಿಸು’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶಾಲಾ ಸಿಬ್ಬಂದಿ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳ ಎದುರು ನನ್ನ ಹೆಸರನ್ನು ಕರೆದು ತರಗತಿಯಿಂದ ಹೊರ ಹಾಕಿದರು ಎಂದು ನೊಂದ ವಿದ್ಯಾರ್ಥಿನಿ ಶಾಲೆಯಲ್ಲಿ ನಡೆದ ಘಟನೆಯನ್ನು ಸಹೋದರಿಯೊಂದಿಗೆ ಹಂಚಿಕೊಂಡಿದ್ದಳು.
ದೀಪ್ತಿ ಕುಟುಂಬ ಇತ್ತೀಚಿಗೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿತ್ತು. ಆಟೋ ಡ್ರೈವರ್‌ ಆಗಿ ಕೆಲಸ ಮಾಡುತ್ತಿರುವ ದೀಪ್ತಿ ತಂದೆಗೆ ಶಾಲೆಯ ಫೀಸ್‌ ಕಟ್ಟಲು ಸಾಧ್ಯವಾಗಿರಲಿಲ್ಲ. 
ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಶಾಲಾಡಳಿತದವರು ದೀಪ್ತಿಗೆ ಪರೀಕ್ಷೆ ಬರೆಯಲು ಬಿಟ್ಟಿರಲಿಲ್ಲ. ಇದರಿಂದ ಅವಮಾನಿತಳಾದ ದೀಪ್ತಿ ತನ್ನ ಮನೆಯಲ್ಲಿ ಸೀಲಿಂಗ್‌ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಮಲ್ಕಾಜ್‌ಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಶಿಕ್ಷಣ ಇಲಾಖೆ ಕೂಡ ಈ ಘಟನೆಯ ಬಗ್ಗೆ ತನಿಖೆ ಕೈಗೊಂಡಿದೆ.
SCROLL FOR NEXT