ಹೈದರಾಬಾದ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹೈದರಾಬಾದ್‌ನ ಚಿತ್ರಮಂದಿರವೊಂದರಲ್ಲಿ 19 ವರ್ಷದ ಯುವತಿಯ ಮೇಲೆ ದುಷ್ಕರ್ಮಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ ಕಳೆದ ಸೋಮವಾರ ರಾತ್ರಿ ಘಟನೆ ನಡೆದಿದ್ದು, 23 ವರ್ಷದ ಕೆ.ಭಿಕ್ಷಾಪತಿ ಎಂಬಾತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ತಿಳಿಸಿರುವಂತೆ ಆರೋಪಿ ಮತ್ತು ಸಂತ್ರಸ್ಥೆ ಫೇಸ್ ಬುಕ್ ಮೂಲಕ ಪರಿಚಿತರಾಗಿದ್ದು, ಬಳಿಕ ಇಬ್ಬರ ನಡುವೆ ಸ್ನೇಹ ಬೆಳದಿದೆ. ಈ ವೇಳೆ ಆರೋಪಿ ಭಿಕ್ಷಾಪತಿ ಯುವತಿಯನ್ನು ಭೇಟಿಯಾಗಲು ನಿರ್ಧರಿಸಿದ್ದು, ಇದಕ್ಕೆ ಯುವತಿ ಕೂಡ ಸಹಮತ ಸೂಚಿಸಿದ್ದಾಳೆ. ಸೋಮವಾರ ಇಬ್ಬರೂ ಪರಸ್ಪರ ಭೇಟಿಯಾಗಿ ಮಾಲ್‌ವೊಂದರಲ್ಲಿ ಸುತ್ತಾಡಿದ್ದಾರೆ. ಬಳಿಕ ಇಬ್ಬರೂ ಪದ್ಮಾವತ್ ಚಿತ್ರ ವೀಕ್ಷಣೆಗೆಂದು ತೆರಳಿದ್ದು, ಬಾಲ್ಕನಿಯಲ್ಲಿ ಪ್ರೇಕ್ಷಕರ ಕೊರತೆ ಇದ್ದ ಸಮಯವನ್ನು ದುರುಪಯೋಗ ಪಡಿಸಿಕೊಂಡ ಭಿಕ್ಷಾಪತಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಈ ಸಂಬಂಧ ಯುವತಿ ಸಿಕಂದರಾಬಾದ್ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಭಿಕ್ಷಾಪತಿಯನ್ನು ಬಂಧಿಸಿದ್ದಾರೆ. ಅಲ್ಲದೆ ತನಿಖೆ ಮುಂದುವರಿಸಿರುವ ಪೊಲೀಸರು ಚಿತ್ರಮಂದಿರದ ಮಾಲೀಕನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈಗ್ಗೆ 2 ತಿಂಗಳ ಹಿಂದೆಯೂ ಕೂಡ ಇಂತಹುದೇ ಘಟನೆ ಮೀರತ್ ನಲ್ಲಿ ವರದಿಯಾಗಿತ್ತು. 16 ವರ್ಷದ ಬಾಲಕಿಯನ್ನು ಚಿತ್ರಮಂದಿರದಲ್ಲಿ ಅತ್ಯಾಚಾರ ಗೈಯಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics