ಶ್ರೀನಗರ: ಮುಸ್ಲಿಮರು ದೇಶ ಬಿಟ್ಟು ಹೋಗಬೇಕು ಎಂದು ಹೇಳಲು ವಿನಯ್ ಕಟಿಯಾರ್ ಯಾರು..? ಈ ದೇಶವೇನು ವಿನಯ್ ಕಟಿಯಾರ್ ಅಪ್ಪನ ಆಸ್ತಿಯೇ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಧರ್ಮದ ಹೆಸರಿನಲ್ಲಿ ದೇಶ ವಿಭಜಿಸುತ್ತಿರುವ ಮುಸ್ಲಿಮರು ದೇಶ ಬಿಟ್ಟು ಹೋಗಬೇಕು ಎಂದು ಹೇಳಿದ್ದ ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಅವರ ಮಾತಿಗೆ ಕಟುವಾಗಿ ಪ್ರತಿಕ್ರಿಯೆ ನೀಡಿರುವ ಫಾರೂಕ್ ಅಬ್ದುಲ್ಲಾ, ವಿನಯ್ ಕಟಿಯಾರ್ ರಂತಹವರು ಪ್ರಚೋಜನೆ ಮಾಡುವ ಉದ್ದೇಶದಿಂದ ಮತ್ತು ಕೋಮು ಗಲಭೆ ಸೃಷ್ಟಿ ಮಾಡಲು ಇಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಮುಸ್ಲಿಮರು ದೇಶ ಬಿಟ್ಟು ಹೋಗಲಿ ಎನ್ನಲು ಕಟಿಯಾರ್ ಯಾರು..? ಇಷ್ಟಕ್ಕೂ ಈ ದೇಶ ಆವರಪ್ಪನ ಆಸ್ತಿಯೇನೂ ಅಲ್ಲ. ಇದು ನಮ್ಮಲ್ಲರ ದೇಶ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಅಂತೆಯೇ ಧರ್ಮಗಳು ಎಂದಿಗೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ ಎಂದ ಫಾರೂಕ್, ಇಂತಹ ವ್ಯಕ್ತಿಗಳ ಹೇಳಿಕೆಯನ್ನು ನಿರ್ಲಕ್ಷಿಸಬೇಕು ಎಂದು ಕರೆ ನೀಡಿದರು.
ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿಗಳೆಂದು ಕರೆಯುವವರ ಶಿಕ್ಷಿಸಬೇಕು ಎಂದು ಹೇಳಿದ್ದ ಎಂಐಎಂ ಮುಖ್ಯಸ್ಥ ಒವೈಸಿ ಹೇಳಿಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಮುಖಂಡ ವಿನಯ್ ಕಟಿಯಾರ್, ಧರ್ಮದ ಹೆಸರಿನಲ್ಲಿ ಮುಸ್ಲಿಮರು ದೇಶವನ್ನು ಇಬ್ಭಾಗ ಮಾಡುತ್ತಿದ್ದು, ದೇಶ ವಿಭಜಿಸುವ ಮುಸ್ಲಿಮರು ದೇಶ ಬಿಟ್ಟು ಹೋಗಬೇಕು. ಭಾರತದಲ್ಲಿರುವ ಮುಸ್ಲಿಮರು ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕೆ ಹೋಗಬೇಕು. ಇಂದು ನಮ್ಮ ದೇಶದಲ್ಲಿ ಯಾವ ಕೆಲಸವನ್ನು ಅವರು ಮಾಡುತ್ತಿದ್ದಾರೋ, ಆ ಕೆಲಸವನ್ನು ಅವರು ಅಲ್ಲಿಯೇ ಮಾಡಲಿ ಎಂದು ಹೇಳಿದ್ದರು.