ನವದೆಹಲಿ: 2018-19 ನೇ ಸಾಲಿನ ಬಜೆಟ್ ನ ಧನಾತ್ಮಕ ಅಂಶಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸಂಸದರಿಗೆ ಲಂಚ್ ಪೇ ಚರ್ಚಾ ಟಾಸ್ಕ್ ನೀಡಿದ್ದಾರೆ.
ಬಜೆಟ್ ನ ಧನಾತ್ಮಕ ಅಂಶಗಳನ್ನು ಸಂಸದರು ಲಂಚ್ ಪೇ ಚರ್ಚಾದಲ್ಲಿ ಪಟ್ಟಿ ಮಾಡತಕ್ಕದ್ದು ಹಾಗೂ ಅದನ್ನು ಹೆಚ್ಚು ಜನರಿಗೆ ಪ್ರಚಾರ ಮಾಡುವುದು ಈ ಟಾಸ್ಕ್ ನ ಉದ್ದೇಶವಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಂಚ್ ಪೇ ಚರ್ಚಾದ ಘೋಷಣೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ರೈತರು, ಮಧ್ಯಮ ವರ್ಗದವರಿಗೆ ಹೆಚ್ಚು ಉಪಯುಕ್ತವಾದದ್ದು ಹಾಗೂ ಈ ಅಂಶಗಳು ಹೆಚ್ಚು ಜನರಿಗೆ ತಲುಪುವಂತೆ ಮಾಡುವುದರ ಬಗ್ಗೆ ಲಂಚ್ ಪೇ ಚರ್ಚಾದಲ್ಲಿ ಸಂಸದರು ಚರ್ಚೆ ನಡೆಸಬೇಕೆಂದು ಪ್ರಧಾನಿ ಹೇಳಿದ್ದಾರೆ. ಸಂಸದರು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಲಂಚ್ ಪೇ ಚರ್ಚಾ ನಡೆಸಬೇಕೆಂದು ಪ್ರಧಾನಿ ಸೂಚನೆ ನೀಡಿದ್ದಾರೆ.