ನವದೆಹಲಿ: ತೀವ್ರ ಸುದ್ದಿಗೆ ಗ್ರಾಸವಾಗಿರುವ ಫ್ರಾನ್ಸ್ ನೊಂದಿಗಿನ ರಾಫೆಲ್ ಜೆಟ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಸುಳ್ಳು ಸಾಬೀತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಹಿಂದಿನ ಯುಪಿಎ ಸರಕಾರ ರಕ್ಷಣಾ ಖರೀದಿಯ ಮೊತ್ತ ಬಹಿರಂಗಪಡಿಸಿರಲಿಲ್ಲ ಎಂಬ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪ್ರತಿಪಾದನೆ ಸುಳ್ಳು ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಾನು ಈ ಹಿಂದೆ ರಾಫೆಲ್ ವ್ಯವಹಾರದ ಕುರಿತು ಅವರನ್ನು ‘ಅರುಣ್ ಜೇಟ್ ಲೈ (ಸುಳ್ಳು)’ ಎಂದು ವಾಗ್ದಾಳಿ ನಡೆಸಿರುವುದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ರಾಫೆಲ್ ಜೆಟ್ ಖರೀದಿಗೆ ಆಗಿರುವ ವೆಚ್ಚವನ್ನು ಬಹಿರಂಗಪಡಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸೂಚಿಸುವಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸವಾಲು ಹಾಕಿದ್ದಾರೆ.
ಅಂತೆಯೇ ‘ಇಲ್ಲಿ ಏನೋ ಅವ್ಯವಹಾರ ನಡೆಯುತ್ತಿದೆ’ (#DealMeinKuchKalaHai) ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ರಾಹುಲ್ ಗಾಂಧಿ ರಾಫೆಲ್ ಒಪ್ಪಂದ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.
ರಾಫೆಲ್ ಜೆಟ್ ಒಪ್ಪಂದ ಸಂಬಂಧ ಇಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "‘ಆತ್ಮೀಯ ಜೇಟ್ಲಿ ಅವರೇ, ರಕ್ಷಣಾ ಖರೀದಿಯ ಮೊತ್ತವನ್ನು ಯುಪಿಎ ಸರ್ಕಾರ ಎಂದಿಗೂ ಬಿಡುಗಡೆ ಮಾಡಿರಲಿಲ್ಲ ಎಂದು ನೀವು ಸುಳ್ಳು ಹೇಳಿದ್ದೀರಿ. ರಕ್ಷಣಾ ಖರೀದಿಯಲ್ಲಿ ಯುಪಿಎ ಪಾರದರ್ಶಕವಾಗಿತ್ತು ಎಂಬುದನ್ನು ದೃಢಪಡಿಸಲು ಸಂಸತ್ತಿನ ಮೂರು ಪ್ರತಿಕ್ರಿಯೆ ಇಲ್ಲಿದೆ. ನಿಮ್ಮ ಸುಳ್ಳನ್ನು ಇದು ಬಯಲು ಮಾಡಿದೆ. ಈಗ ಪ್ರತಿ ರಾಫೆಲ್ ಜೆಟ್ ನ ವೆಚ್ಚ ಎಷ್ಟು ಎಂಬುದನ್ನು ನಿಮ್ಮ ರಕ್ಷಣಾ ಸಚಿವರು ದೇಶಕ್ಕೆ ತಿಳಿಸಲು ಹೇಳಿ’’ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಟ್ವೀಟ್ ನೊಂದಿಗೆ ಲಗತ್ತಿಸಿರುವ ಈ ಮೂರು ಪ್ರತಿಕ್ರಿಯೆ ಯುಪಿಎ ತನ್ನ ಅಧಿಕಾರಾವಧಿಯಲ್ಲಿ ರಷ್ಯಾದಿಂದ ಸುಖೋಯ್ ವಿಮಾನ, ಐಎನ್‌ಎಸ್ ವಿಕ್ರಮಾದಿತ್ಯ ಖರೀದಿಸಲು ಹಾಗೂ ಮಿರೇಜ್ ವಿಮಾನವನ್ನು ಮೇಲ್ದರ್ಜೆಗೆ ಏರಿಸಲು ಆದ ವೆಚ್ಚವನ್ನು ಸಂಸತ್ತಿಗೆ ತಿಳಿಸಿರುವುದನ್ನು ಬಹಿರಂಗಗೊಳಿಸಿದೆ.