ಕೊಲ್ಕತ್ತಾ: 2019ರ ಲೋಕಸಭಾ ಚುನಾವಣೆ ನಂತರ ಮತ್ತೆ ಪ್ರಧಾನಿ ನರೇಂದ್ರಮೋದಿ ಅಧಿಕಾರಕ್ಕೆ ಬಂದರೆ ರಾಷ್ಟ್ರಪತಿ ಆಡಳಿತವಿದ್ದಂತೆ ಇರುತ್ತದೆ ಎಂದು ಗುಜರಾತ್ ಪೈರ್ ಬ್ರಾಂಡ್ ಖ್ಯಾತಿಯ ಪಾಟೀದಾರ್ ಮುಖಂಡ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಮೋದಿ ಸರ್ಕಾರ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದು, ಬಿಜೆಪಿ ಹೊರತಾದ ಎಲ್ಲಾ ಪಕ್ಷಗಳು ಮತ್ತೆ ಒಂದಾಗುವ ಮೂಲಕ ಹೋರಾಟ ನಡೆಸುವಂತೆ ಹಾರ್ದಿಕ್ ಪಟೇಲ್ ಕರೆ ನೀಡಿದ್ದಾರೆ.
ಸಂಸತ್ತಿನಲ್ಲಿ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮಾಡಿದ ಟೀಕೆ ಕುರಿತು ಪ್ರತಿಕ್ರಿಯಿಸಿದ ಹಾರ್ದಿಕ್ ಪಟೇಲ್, ಪ್ರಧಾನಮಂತ್ರಿಯಾದವರು ದೇಶದ ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ , ಭದ್ರತೆ , ಸುರಕ್ಷತೆ ಕುರಿತು ಮಾತನಾಡುವುದು ಸಾಮಾನ್ಯ. ಆದರೆ, ಪ್ರತಿಪಕ್ಷ ಕುರಿತು ಟೀಕೆ ಮಾಡುವುದಕ್ಕಾಗಿ 99 ನಿಮಿಷ ತೆಗೆದುಕೊಂಡ ಇಂತಹ ಪ್ರಧಾನಿ ನಮಗೆ ಬೇಕಾಗಿಲ್ಲ ಎಂದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರಳತೆಯಿಂದ ಆಕರ್ಷಿತಗೊಂಡಿದ್ದು, ಲೋಕಸಭಾ ಚುನಾವಣೆ ವೇಳೆ ಬಂಗಾಳದಲ್ಲಿ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದರು.