ಮುಂಬೈ: ನಾಲ್ವರು ದುಷ್ಕರ್ಮಿಗಳು ಶೂ ಮೇಲೆ ಬಿದಿದ್ದ ಉಗುಳನ್ನು ನೆಕ್ಕುವಂತೆ ಕಿರುಕುಳ ನೀಡಿದ್ದರಿಂದ ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
ದಕ್ಷಿಣ ಮುಂಬೈನ ಕುಪೆ ಪರೇಡ್ ಮಾರ್ಕೆಟ್ ಬಳಿ ಕೆಲ ದುಷ್ಕರ್ಮಿಗಳು ಕಾಸಿಮ್ ಷೈಕ್ ಎಂಬವರ ಮೇಲೆ ದಾಳಿ ಮಾಡಿದ್ದು, ಶೂ ಮೇಲೆ ಬಿದಿದ್ದ ಉಗುಳನ್ನು ನೆಕ್ಕುವಂತೆ ಕಿರುಕುಳ ನೀಡಿದ್ದಾರೆ. ಅವರಿಂದ ಹೇಗೋ ಬಿಡಿಸಿಕೊಂಡು ಬಂದ ಕಾಸಿಮ್ ಷೇಕ್, ಅಮಾನವೀಯ ಕೃತ್ಯದಿಂದ ಮನನೊಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮುನ್ನಾ ಆ ಯುವಕ ಡೆತ್ ನೋಟ್ ಬರೆದಿಟ್ಟಿದ್ದು, ನಾಲ್ವರ ಹೆಸರನ್ನು ಉಲ್ಲೇಖಿಸಿದ್ದಾನೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾನೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.