ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳು
ಶ್ರೀನಗರ: ಶ್ರೀನಗರದ ಕರಣ್ ನಗರದಲ್ಲಿರುವ ಸಿಆರ್'ಪಿಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಶಸ್ತ್ರಾಧಾರಿ ಉಗ್ರರ ಯತ್ನವನ್ನು ಭಾರತೀಯ ಸೇನಾಪಡೆ ವಿಫಲಗೊಳ್ಳುವಂತೆ ಮಾಡಿದ್ದು, ಈ ವೇಳೆ ನಡೆಸಲಾದ ಎನ್ ಕೌಂಟರ್ ವೇಳೆ ಓರ್ವ ಸಿಆರ್'ಪಿಎಫ್ ಯೋಧ ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೋಮವಾರ ತಿಳಿದುಬಂದಿದೆ.
ಇಂದು ಬೆಳಿಗ್ಗೆ 4.30ರ ಸುಮಾರಿಗೆ ಶ್ರೀನಗರದಲ್ಲಿರುವ ಸಿಆರ್'ಪಿಎಫ್ ಕ್ಯಾಂಪ್ ಬಳಿ ಬ್ಯಾಗ್ ಗಳು ಹಾಗೂ ಎಕೆ-47 ರೈಫಲ್ಸ್'ಗಳನ್ನು ಹಿಡಿದು ಬಂದಿರುವ ಇಬ್ಬರು ಉಗ್ರರು ಕ್ಯಾಂಪ್ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಬಳಿಕ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಭದ್ರತಾ ಪಡೆಗಳು ದಿಟ್ಟ ಉತ್ತರವನ್ನು ನೀಡಿದ್ದಾರೆ. ಬಳಿಕ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪರಾರಿಯಾದ ಉಗ್ರರು ಇದೀಗ ಸ್ಥಳವೊಂದರಲ್ಲಿರುವ ಮನೆಯಲ್ಲಿ ಅಡಗಿ ಕುಳಿತಿದ್ದು, ಮನೆಯನ್ನು ಸುತ್ತುವರೆದಿರುವ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಗುಂಡಿನ ಕಾಳದಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೇನಾ ಪಡೆಗಳು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.
ಎನ್ ಕೌಂಟರ್ ವೇಳೆ ಉಗ್ರರ ಗುಂಡಿನ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಸಿಆರ್'ಪಿಎಫ್ ಯೋಧರು ಹುತಾತ್ಮರಾಗಿದ್ದಾರೆಂದು ವರದಿಗಳು ತಿಳಿಸಿವೆ.
ಉಗ್ರರ ದಾಳಿ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಡಿಜಿಪಿ ವೈದ್ ಅವರು, ಭದ್ರತಾಪಡೆಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಶ್ರೀನಗರದ ಕರಣ್ ನಗರದ ಸಿಆರ್'ಪಿಎಫ್ ಕ್ಯಾಂಪ್ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಲು ಬಂದಿದ್ದರು. ಉಗ್ರರ ಯತ್ನ ವಿಫಲಗೊಳ್ಳುವಂತೆ ಮಾಡಿದ ಯೋಧರನ್ನು ಅಭಿನಂದಿಸುತ್ತೇನೆ. ದುರಾದೃಷ್ಟವಶಾತ್ ಸ್ಥಳದಲ್ಲಿ ಇಬ್ಬರು ಉಗ್ರರು ಅಡಗಿಕುಳಿತಿದ್ದಾರೆ. ಸ್ಥಳದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಜಮ್ಮುವಿನ ಸುಂಜುವಾನ್ ಸೇನಾ ಕ್ಯಾಂಪ್ ಮೇಲೆ ಶನಿವಾರ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಐವರು ಭದ್ರತಾ ಪಡೆಗಳು ಹುತಾತ್ಮರಾಗಿದ್ದು, ಓರ್ವ ನಾಗರೀಕ ಸಾವನ್ನಪ್ಪಿದ್ದಾನೆ. ಅಲ್ಲದೆ, 6 ಸೇನಾ ಪಡೆಗಳು ಹಾಗೂ 6 ನಾಗರೀಕರು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡಿರುವ ಸೇನಾಪಡೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿದೆ. ಈಗಲೂ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಯುತ್ತಿದೆ.