ಕೋಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ದೌಲತಾಬಾದ್ ನ ನೌವಡಾಪುರ ಗ್ರಾಮದಲ್ಲಿ 75 ವರ್ಷದ ಮಹಿಳೆ ಹಾಗೂ ಆಕೆಯ 40 ವರ್ಷದ ವಿಕಲಚೇತನ ಮಗಳು ಇಬ್ಬರು ಭಿಕ್ಷೆ ಬೇಡಿ ಶೌಚಾಲಯ ನಿರ್ಮಿಸುತ್ತಿದ್ದಾರೆ.
20 ವರ್ಷಗಳ ಹಿಂದೆ ಪತಿ ದಿನ್ ಮೊಹಮ್ಮದ್ ಮೃತಪಟ್ಟ ನಂತರ ಮೂವರು ಮಕ್ಕಳು ರಹಿಮಾ ಬೇವಾ ಮತ್ತು ಆಕೆಯ ಮಗಳು ಕಮಲ ಖತುನ್ ಅವರನ್ನು ಮನೆಯಿಂದ ಹೊರ ಹಾಕಿದ್ದರಿಂದ ಈಗ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.
ಭಿಕ್ಷೆ ಬೇಡುವ ಪರಿಸ್ಥಿತಯಲ್ಲೂ ನಾನು ನನ್ನ ಮತ್ತು ವಿಕಲಚೇತನ ಮಗಳ ಆರೋಗ್ಯ ದೃಷ್ಟಿಯಿಂದ ಶೌಚಾಲಯಕ್ಕೆ ಮೊದಲ ಆದ್ಯತೆ ನೀಡಿದ್ದು, ನಾವು ಇದುವರೆಗೂ ಬಯಲಿನಲ್ಲೇ ಹೋಗಿದ್ದೇವೆ ಎಂದು ರಹಿಮಾ ನೋವಿನಿಂದ ಹೇಳಿಕೊಂಡಿದ್ದಾರೆ.
ಕೆಲವು ಅಧಿಕಾರಿಗಳು ಬಯಲಿನಲ್ಲಿ ಮಲವಿಸರ್ಜನೆ ಮಾಡುವುದು ಆರೋಗ್ಯಕ್ಕೆ ಹಾನಿ ಮತ್ತು ಸುರಕ್ಷಿತವಲ್ಲ ಎಂದು ನಮಗೆ ಹೇಳಿದ್ದರು. ಹೀಗಾಗಿ ನಾನು ಭಿಕ್ಷೆ ಬೇಡಿ ಶೌಚಾಲಯ ನಿರ್ಮಿಸುತ್ತಿದ್ದೇನೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆ ಪಶ್ಚಿಮ ಬಂಗಾಳದಲ್ಲಿ ಜಾರಿಯಾಗಿಲ್ಲ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮದೇ ನಿರ್ಮಲ ಬಂಗಾಳ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ 10 ಸಾವಿರ ರುಪಾಯಿ ನೀಡುತ್ತಿದೆ. ಆದರೆ ರಹಿಮಾ ಮಕ್ಕಳು ಈಗಾಗಲೇ ಈ ಯೋಜನೆಯ ಲಾಭ ಪಡೆದಿದ್ದು, ಅವರೇ 15 ಸಾವಿರ ರುಪಾಯಿ ಸ್ವಂತ ಖರ್ಚಿನಲ್ಲಿ ಶೌಚಾಲಯ ನಿರ್ಮಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics