ದೇಶ

ಹುತಾತ್ಮ ಯೋಧರಲ್ಲೂ ಕೋಮುವಾದ ಬೇಡ: ರಾಜಕಾರಣಿಗಳಿಗೆ ಸೇನೆ ಸಲಹೆ

Lingaraj Badiger
ಶ್ರೀನಗರ: ಹುತಾತ್ಮ ಯೋಧರ ವಿಚಾರದಲ್ಲೂ ಜಾತಿವಾದ ಅಥವಾ ಕೋಮವಾದ ಮಾಡಬೇಡಿ ಎಂದು ಭಾರತೀಯ ಸೇನೆ ಪರೋಕ್ಷವಾಗಿ ರಾಜಕಾರಣಿಗಳಿಗೆ ಬುಧವಾರ ಸಲಹೆ ನೀಡಿದೆ.
'ಹುತಾತ್ಮ ಯೋಧರ ವಿಚಾರದಲ್ಲಿ ನಾವು ಜಾತಿವಾದ ಮಾಡುವುದಿಲ್ಲ. ಸೇನೆಯ ಬಗ್ಗೆ ಗೊತ್ತಿಲ್ಲದವರು ಮಾತ್ರ ಈ ರೀತಿ ಹೇಳಿಕೆ ನೀಡುತ್ತಾರೆ. ಎಲ್ಲ ಯೋಧರು ದೇಶಸೇವೆಯ ಗುರಿ ಹೊಂದಿರುತ್ತಾರೆ' ಎಂದು ನಾರ್ಥರ್ನ್‌ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್‌ ದೇವರಾಜ್‌ ಅನ್ಬು ಅವರು ಹೇಳಿದ್ದಾರೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಸಂಜುವಾನ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಏಳು ಯೋಧರ ಪೈಕಿ ಐವರು ಮುಸ್ಲಿಮರಾಗಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ನೀಡಿದ ಹೇಳಿಕೆಗೆ ಪ್ರತಿಯಾಗಿ ದೇವರಾಜ್‌ ಈ ರೀತಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ರೀತಿಯ ಹೇಳಿಕೆಗಳನ್ನು ನಾಯಕರು ನೀಡುವ ಮುನ್ನ ಹಲವು ಬಾರಿ ಯೋಚಿಸಬೇಕು. ಯೋಧರರೆಲ್ಲರಿಗೂ ದೇಶ ಸೇವೆಯೇ ಮುಖ್ಯ ಧ್ಯೇಯವಾಗಿರುತ್ತದೆ ಎಂದು ದೇವರಾಜ್‌ ಸ್ಪಷ್ಟಪಡಿಸಿದರು.
ಸಂಜುವಾನ್ ಉಗ್ರ ದಾಳಿಯಲ್ಲಿ ಹುತಾತ್ಮರಾದ ಏಳು ಯೋಧರ ಪೈಕಿ ಐವರು ಮುಸ್ಲಿಮರಾಗಿದ್ದರು. ಮುಸ್ಲಿಮರೆಲ್ಲರೂ ಪಾಕಿಸ್ತಾನಿಗಳು ಎಂದು ಹೇಳುವವರೆಲ್ಲ ಇದನ್ನು ನೋಡಿ ತಿಳಿದುಕೊಳ್ಳಬೇಕು. ಮುಸ್ಲಿಮರ ದೇಶಭಕ್ತಿ ಅರಿಯಬೇಕು ಎಂದು ಓವೈಸಿ ಹೇಳಿದ್ದರು.
SCROLL FOR NEXT