ನವದೆಹಲಿ: "ಭಾರತವನ್ನು ವಿಶ್ವ ಗುರು ಆಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಯತ್ನಿಸುತ್ತಿದೆ" ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದೆಹಲಿಯಲ್ಲಿ ಜಲ ಮಿಟ್ಟಿ ರಥ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್ "ಇತರ ದೇಶಗಳಲ್ಲಿ ವಾಸಿಸುವ ಜನರ ಹೃದಯದಲ್ಲಿ ಭಯ ಹುಟ್ಟಿಸುವುದಕ್ಕಾಗಿ ನಾವು ಪ್ರಬಲರಾಗಿರಬೇಕೆಂದು ಬಯಸುವುದಿಲ್ಲ, ಶ್ರೀಮಂತ ಭಾರತವನ್ನು ನಿರ್ಮಿಸಲು ನಾವು ಬಯಸುತ್ತೇವೆ ಇದಕ್ಕಾಗಿ ಭಾರತ ವಿಶ್ವ ಗುರುವಾಗಬೇಕಿದೆ" ಎಂದರು.
ಯಾತ್ರೆಯ ಉದ್ದೇಶದ ಕುರಿತು ಮಾತನಾಡಿದ ಸಚಿವರು ಇದು ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿಯ ಕನಸನ್ನು ಹೊಂದಿದೆ ಎಂದಿದ್ದಾರೆ. "ಈ ರಥ ಯಾತ್ರೆಯು ಇತರ ರಥ ಯಾತ್ರೆಗಳಿಂದ ಭಿನ್ನವಾಗಿದೆ. ಸರ್ಕಾರವನ್ನು ಸುಸ್ಥಿರಗೊಳಿಸಲು ಅಥವಾ ಅದರ ಕಾರ್ಯಕ್ರಮದ ಪ್ರಚಾರಕ್ಕಾಗಿ ಈ ಯಾತ್ರೆ ಆಯೋಜಿತವಾಗಿಲ್ಲ, ರಾಷ್ಟ್ರ ನಿರ್ಮಾಣವನ್ನು ಉದ್ದೇಶವಾಗಿಸಿಕೊಂಡು ಈ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ದೇಶವನ್ನು ಸ್ವತಂತ್ರ, ಶಕ್ತಿಶಾಲಿ ಹಾಗೂ ಶ್ರೀಮಂತ ರಾಷ್ಟ್ರವನ್ನಾಗಿ ಕಾಣಲು ನಾವು ಬಯಸುತ್ತೇವೆ."
ಮಾರ್ಚ್ ನಲ್ಲಿ ನಡೆಯಲಿರುವ ಮಹಾ ಯಾಗಕ್ಕೆ ಪೂರ್ವಭಾವಿಯಾಗಿ ಈ ಯಾತ್ರೆಯನ್ನುಹಮ್ಮಿಕೊಳ್ಳಲಾಗಿದೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಮತ್ತು ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿ ಎನ್ನುವ ಕಾರಣಕ್ಕಾಗಿ ದೆಹಲಿ ಕೆಂಪುಕೋಟೆಯ ಸಮೀಪ ಮಾರ್ಚ್ 18ರಿಂದ 25ರವರೆಗೆ ಏಳು ದಿನಗಳ ಕಾಲ ಈ ಮಹಾಯಾಗವು ನಡೆಯಲಿದೆ. ನೂರ ಎಂಟು ಹೋಮ ಕುಂಡಗಳು ಈ ಯಾಗಕ್ಕೆ ಸಿದ್ದವಾಗಿದ್ದು 2,100 ಪುರೋಹಿತರು ಮತ್ತು 51,000ಕ್ಕೂ ಹೆಚ್ಚಿನ ಜನರು ಇದರಲ್ಲಿ ಭಾಗವಹಿಸ್ಲುವವರಿದ್ದಾರೆ.