ದೇಶ

ಉತ್ತರ ಪ್ರದೇಶ: ಯೋಗಿ ಸರ್ಕಾರದಿಂದ ಮದರಸಾಗಳ ಆಧುನಿಕರಣಕ್ಕೆ 404 ಕೋಟಿ ರೂ. ಅನುದಾನ, 2018-19 ರಾಜ್ಯ ಬಜೆಟ್ ನಲ್ಲಿ ಘೋಷಣೆ

Raghavendra Adiga
ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಶುಕ್ರವಾರದಂದು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದೆ. 
ಈ ಸಾಲಿನ ಬಜೆಟ್ ನಲ್ಲಿ  ಒಟ್ಟಾರೆ 2,757 ಕೋಟಿ ರೂ. ಗಳನ್ನು ಅಲ್ಪ ಸಂಖ್ಯಾತರ ಅಭಿವೃದ್ಧಿ ಮತ್ತು ಕಲ್ಯಾಣ ಇಲಾಖೆಗೆ ನೀಡಿರುವ ಯೋಗಿ ಆದಿತ್ಯನಾಥ್ ಸರ್ಕಾರ  ಮದರಸಾಗಳ ಆಧುನೀಕರಣಕ್ಕಾಗಿ  404 ಕೋಟಿ ರೂ. ಗಳನ್ನು ಮೀಸಲಿಟ್ಟಿದೆ. ಈ ಮೂಲಕ ಕಳೆದ ಸಾಲಿನ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಅನುದಾನಕ್ಕಿಂತಲೂ ಶೇ.10 ರಷ್ಟು ಹೆಚ್ಚಿನ ಅನುದಾನವನ್ನು ನೀಡಿದೆ. 
ಕಳೆದ ಸಾಲಿನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಅಲ್ಪಸಂಖ್ಯಾತರಿಗಾಗಿ 2,475.61 ಕೋಟಿ ರೂ. ನೀಡಿತ್ತು. ಆದರೆ ಈ ಬಾರಿ ಇನ್ನೂ 282 ಕೋಟಿ ರೂ. ಹೆಚ್ಚಳ ಮಾಡಿ 2,757 ಕೋಟಿ ಮಂಜೂರು ಮಾಡಿದೆ.
ಉತ್ತರ ಪ್ರದೇಶದ ಮದರಸಾಗಳಲ್ಲಿ ಎನ್‍ಸಿಇಆರ್ ಟಿ ಪಠ್ಯಕ್ರಮ ಹಾಗೂ ಉನ್ನತ ಮಾಧ್ಯಮಿಕ ಶಿಕ್ಷಣದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ಭೋದಿಸಲು ಆದೇಶ ನೀಡಿರುವ ಯೋಗಿ ಸರ್ಕಾರವು ಇದೀಗ ಮದರಸಾಗಳ ಆಧುನಿಕರಣಕ್ಕಾಗಿ ಹಣ ನೀಡಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು  ಲಖನೌ ನಲ್ಲಿನ ಒಂದು ಮದರಸಾ ಮುಖ್ಯಸ್ಥ ಮೊಹದ್ ಫಾರೂಕ್ ಹೇಳಿದ್ದಾರೆ.
ರಾಜ್ಯದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಯೋಜನೆಗಾಗಿ 1,500 ಕೋಟಿ ರೂ.ಗಳನ್ನು ನೀಡುತ್ತಿರುವ ಯೋಗಿ  ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ವ್ಯವಸ್ಥೆ, ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಮದುವೆಗಳಿಗೂ ತನ್ನ ಬಜೆಟ್ ನಲ್ಲಿ ಹಣ ಮಂಜೂರು ಮಾಡಿದೆ.
SCROLL FOR NEXT