ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 11,400 ಕೋಟಿ ರೂ ಹಗರಣಕ್ಕೆ ಸಂಬಂಧಿಸಿದಂತೆ 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಹಣಕಾಸು ಸಚಿವಾಲಯ ಹಾಗೂ ಬ್ಯಾಂಕಿಗೆ ಕೇಂದ್ರ ಜಾಗೃತಿ ಆಯೋಗ ಸೂಚಿಸಿದೆ.
ಪ್ರಕರಣ ಸಂಬಂಧ ಪಂಜಾಬ್ ನ್ಯಾಷನಲ್ ಬ್ಯಾಂಕ್, ಆರ್ ಬಿಐ ಹಾಗೂ ಹಣಕಾಸು ಸೇವಾ ಇಲಾಖೆ ಅಧಿಕಾರಿಗಳು ಎರಡು ಗಂಟೆಗಳ ಕಾಲ ಕೇಂದ್ರ ಜಾಗೃತ ಆಯೋಗಕ್ಕೆ ವರದಿ ನೀಡಿದ್ದು,ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹೆಸರು ತಿಳಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಜಾಗೃತ ಆಯೋಗ ಅಧಿಕಾರಿಗಳಿಗೆ ತಿಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳ ನಂತರ ಸಿಬಿಐನೊಂದಿಗೂ ಕೇಂದ್ರ ಜಾಗೃತ ಆಯೋಗ ಸಭೆ ನಡೆಸಿತು. ಇದು ಬಹುಹಂತದಲ್ಲಿ ವೈಫಲ್ಯವಾಗಿರುವುದನ್ನು ಕೇಂದ್ರ ಜಾಗೃತ ಆಯೋಗದ ಗಮನಕ್ಕೆ ತರಲಾಗಿದೆ ಎಂದು ಸಿಬಿಐ ಹೇಳಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ 11.400 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಕೂಡಾ ಮುಂಬೈಯಲ್ಲಿನ ನೀರವ್ ಮೋದಿ ನಿವಾಸದ ಮೇಲೆ ದಾಳಿ ನಡೆಸಿ ಶೋಧ ನಡೆಸಿತು.
ಮುಂಬೈ, ಪುಣೆ, ಔರಾಗಬಾದ್, ಥಾಣೆ, ಕೊಲ್ಕತ್ತಾ, ದೆಹಲಿ, ಲಖನೌ, ಬೆಂಗಳೂರು, ಸೂರತ್ ಸೇರಿದಂತೆ ದೇಶದ 34 ಕಡೆಗಳಲ್ಲಿ ಕೇಂದ್ರ ತನಿಖಾ ತಂಡಗಳು ಶೋಧ ಕಾರ್ಯಾಚರಣೆ ನಡೆಸಿವೆ.