ದೇಶ

ಕಳಪೆ ಬೀಚುಗಳು, ಕರ್ನಾಟಕಕ್ಕೆ ಎರಡನೇ ಸ್ಥಾನ: ಸಂಶೋಧನಾ ವರದಿ

Raghavendra Adiga
ಮುಂಬೈ: ಭಾರತದಲ್ಲಿ ಗೋವಾ ಬೀಚ್ ಗಳ ಬಳಿಕ ಅತ್ಯಂತ ಕಳಪೆ ಗುಣಮಟ್ಟದ ಬೀಚ್ ಗಳು ಕರ್ನಾಟಕದಲ್ಲಿದೆ ಎನ್ನುವ ಕಳವಳಕಾರಿ ಅಂಶವೊಂದು ಸಂಶೋಧನಾ ವರದಿಯಿಂದ ಬಹಿರಂಗವಾಗಿದೆ. ಬೀಚ್ ಗಳಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯಗಳು ಸಂಗ್ರಹವಾಗಿರುವ ಎರಡನೇ ರಾಜ್ಯ ಕರ್ನಾಟಕವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೇರಳ ಕೊಚ್ಚಿಯ ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್‍ಆರ್ ಐ) ಈ ವರದಿ ತಯಾರಿಸಿದ್ದು ದೇಶದ ಹನ್ನೊಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ.
ಕರ್ನಾಟಕದ 33 ಬೀಚುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳಿದೆ. ಇಲ್ಲಿನ ಒಂದು ಮೀಟರ್ ಮರಳಿನಲ್ಲಿ 21.91 ಗ್ರಾಂ ಪ್ಲಾಸ್ಟಿಕ್ ಅವಶೇಷಗಳಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ರಾಷ್ಟ್ರದಲ್ಲಿ ಅತ್ಯಂತ ಕಳಪೆಯಾಗಿರುವ ಗೋವಾ ಬೀಚ್ ಗಳಲ್ಲಿ ಒಂದು ಮೀಟರ್ ಮರಳಿನಲ್ಲಿ 25.47 ಗ್ರಾಂ ಪ್ಲಾಸ್ಟಿಕ್ ತ್ಯಾಜ್ಯ ದೊರೆಯುತ್ತದೆ. ಗೋವಾದ ಬೀಚ್ ನಲ್ಲಿ  ನೈಲಾನ್ ಫಿಶಿಂಗ್ ನೆಟ್, ಗ್ಲಾಸ್, ಇ-ತ್ಯಾಜ್ಯ, ಥರ್ಮೋಕೋಲ್  ನಂತಹಾ ಹಾನಿಕಾರಕ ವಸ್ತುಗಳು ಕಂಡುಬಂದಿದೆ.
ಕರ್ನಾಟಕದ ಬೀಚ್ ಗಳಲ್ಲಿ ಕಸ ಅತ್ಯಧಿಕವಾಗಿದ್ದು ಪ್ರತಿ ಮೀಟರ್ ಗೆ 178.44 ಗ್ರಾಂ ಕಸ ಕಂಡುಬರುತ್ತದೆ.
ಇನ್ನು ಗೋವಾ ಹಾಗೂ ಕರ್ನಾಟಕದ ಬಳಿಕ ಗುಜರಾತ್ ರಾಜ್ಯದ ಕರಾವಳಿ ತೀರಗಳು ಅತ್ಯಂತ ಕಳಪೆಯಾಗಿದೆ ಎಂದಿರುವ ವರದಿ ಗುಜರಾತ್ ನಲ್ಲಿ ಕಸದ ಪ್ರಮಾಣ ಪ್ರತಿ ಮೀಟರ್ ಗೆ 90.56 ಗ್ರಾಂನಷ್ಟಿದೆ ಎಂದಿದೆ. ಇಷ್ಟೇ ಅಲ್ಲದೆ ಗುಜರಾತ್ ಕಡಲ ತೀರದಲ್ಲಿ ಪ್ರತಿ ಮೀಟರ್ ಮರಳಿನಲ್ಲಿ 12.62 ಗ್ರಾಂ ಪ್ಲಾಸ್ಟಿಕ್ ಕಂಡುಬರುತ್ತದೆ ಎಂದು ಉಲ್ಲೇಖಿಸಲಾಗಿದೆ.
ಒಟ್ಟು ಹನ್ನೆರಡು ಮಂದಿ ತಂಡವು ದೇಶದ 254 ಬೀಚ್ ಗಳಲ್ಲಿ ಈ ಸಮೀಕ್ಷೆ  ನಡೆಸಿ ವರದಿ ಪ್ರಕಟಿಸಿದೆ.
SCROLL FOR NEXT