ದೇಶ

ದೆಹಲಿ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಪ್ರಕರಣ: ಎಎಪಿ ಶಾಸಕರಿಗೆ 14 ದಿನ ನ್ಯಾಯಾಂಗ ಬಂಧನ

Nagaraja AB

ದೆಹಲಿ:  ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಇಬ್ಬರು ಎಎಪಿ ಶಾಸಕರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಆರೋಪಿಗಳನ್ನು ತಿಹರ್ ಜೈಲಿಗಟ್ಟಿದ್ದು, ಜಾಮೀನು ಅರ್ಜಿ ಕುರಿತ ವಿಚಾರಣೆಯನ್ನು ನಾಳೆಗೆ ಕಾಯ್ದಿರಿಸಿದೆ.

ಒಂದು ದಿನದ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಎಎಪಿ ಶಾಸಕರಾದ ಅಮಾನಾತುಲ್ಲಾಖಾನ್ ಹಾಗೂ ಪ್ರಕಾಶ್ ಜರ್ವಾಲ್ ಅವರನ್ನು ನಗರ ಮ್ಯಾಜಿಸ್ಚ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಶೇಪಾಲಿ ಬರ್ನಾಲಾ ತಂಡನ್ ಮುಂದಿ ಹಾಜರುಪಡಿಸಲಾಯಿತು.

ಪೊಲೀಸ್ ವಶಕ್ಕೆ ನೀಡುವಂತೆ ಮಾಡಿದ ಮನವಿಯನ್ನು ನಿನ್ನೆ ತಿರಸ್ಕರಿಸಿದ ನ್ಯಾಯಾಲಯ , ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಅಗತ್ಯ ದಾಖಲೆ ನೀಡುವಂತೆ ವಕೀಲರಿಗೆ ಸೂಚಿಸಿತು.

ವಿಚಾರಣೆಗಾಗಿ ಎರಡು ದಿನ ವಶಕ್ಕೆ ನೀಡುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ , ತನಿಖೆಗೆ ಸಹಕರಿಸಲು ಶಾಸಕರು ಸಿದ್ಧರಾಗಿದ್ದು, ಅವರಿಂದ ಯಾವುದೇ ಆಸ್ತಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ಫೆಬ್ರವರಿ19 ರಂದು ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ನಡೆದಿದ್ದ ಹಲ್ಲೆ ಸಂಬಂಧ ಇಬ್ಬರು ಶಾಸಕರನ್ನು ಬಂಧಿಸಲಾಗಿತ್ತು.

SCROLL FOR NEXT