ನವದೆಹಲಿ: ನಟಿ ಶ್ರೀದೇವಿ ಸಾವಿನ ಸಂಬಂಧ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದು, ಶ್ರೀದೇವಿ ಅವರದ್ದು ಸಾಮಾನ್ಯ ಸಾವಲ್ಲ.. ಅದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸುಬ್ರಮಣಿಯನ್ ಸ್ವಾಮಿ, ಸೂಪರ್ ಸ್ಟಾರ್ ಶ್ರೀದೇವಿ ಎಂದಿಗೂ ಹಾರ್ಡ್ ಡ್ರಿಂಕ್ಸ್ ಸೇವಿಸುತ್ತಿರಲಿಲ್ಲ. ಹೀಗಿದ್ದೂ ಅವರು ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಬಹುಶಃ ಯಾರಾದರೂ ಅವರಿಗೆ ಬಲವಂತವಾಗಿ ಕುಡಿಸಿರಬಹುದು. ಮತ್ತೊಂದು ಪ್ರಮುಖಾಂಶವೆಂದರೆ ಟಬ್ ನಲ್ಲಿ ಮುಳುಗಿ ಉಸಿರಾಡದೇ ಶ್ರೀದೇವಿ ಸತ್ತಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಆದರೆ ಟಬ್ ನಲ್ಲಿ ಮುಳುಗಿ ಮೇಲೇಳದೇ ಶ್ರೀದೇವಿ ಸತ್ತಿದ್ದು ಹೇಗೆ... ಒಂದೋ ಯಾರಾದರೂ ಅವರನ್ನು ಬಲವಂತವಾಗಿ ಟಬ್ ನಲ್ಲಿ ಮುಳುಗಿಸಿರಬೇಕು ಎಂದು ಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಮತ್ತೊಂದು ಬಾಂಬ್ ಸಿಡಿಸಿರುವ ಸ್ವಾಮಿ, ಬಾಲಿವುಡ್ ನಟಿಯರ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಡುವಿನ ಸಂಬಂಧಗಳ ಕುರಿತು ಗಮನ ಹರಿಸಬೇಕಿದೆ. ನಟಿ ಶ್ರೀದೇವಿಯದ್ದು ಸಾವಲ್ಲ ಹತ್ಯೆ ಎನ್ನಲು ಮತ್ತಷ್ಟು ಕಾರಣಗಳಿದ್ದು, ಮರಣೋತ್ತರ ಪರೀಕ್ಷೆಯೇ ಆಕೆ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಹೇಳುತ್ತಿದೆ. ಹೀಗಿರುವಾಗ ವೈದ್ಯನೋರ್ವ ತುರ್ತಾಗಿ ಆಗಮಿಸಿ ಆಕೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಹೇಗೆ ಹೇಳಿದ ಎಂದು ಹೇಳುವ ಮೂಲಕ ನಟಿ ಶ್ರೀದೇವಿ ಸಾವಿನಲ್ಲಿ ಭೂಗತ ಪಾತಕಿಯ ಕೈವಾಡವಿರಬಹುದೇ ಎಂಬ ಅನುಮಾನ ಕೂಡ ಹುಟ್ಟುಹಾಕಿದ್ದಾರೆ.
ಒಟ್ಟಾರೆ ಶ್ರೀದೇವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ದುಬೈ ಪೊಲೀಸರು ಎಲ್ಲ ಮೂಲಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಖಲೀಜ್ ಟೈಮ್ಸ್ ಪತ್ರಿಕೆ ವರದಿ ಮಾಡಿದಂತೆ ನಟಿ ಶ್ರೀದೇವಿ ಮದುವೆ ಸಮಾರಂಭದ ಬಳಿಕ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಬಿಡುಗಡೆಯಾಗಿದ್ದ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಆಕೆಯ ದೇಹದಲ್ಲಿ ಮದ್ಯದ ಅಂಶಗಳು ಪತ್ತೆಯಾಗಿವೆ ಎಂದು ವರದಿಯಾಗಿತ್ತು.
ಒಟ್ಟಾರೆ ನಟಿ ಶ್ರೀದೇವಿ ಸಾವಿಗೆ ಸಂಬಂಧಿಸಿದಂತೆ ಅನುಮಾನದ ಹುತ್ತ ಬೆಳೆಯುತ್ತಾ ಸಾಗಿದೆ.