ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ, ನೀಟ್ ಅರ್ಹತಾ ಮಾನದಂಡವನ್ನು ನಿರ್ಧರಿಸುವಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಸಿಬಿಎಸ್ಇ ಸ್ಪಷ್ಟಪಡಿಸಿದೆ. ನೀಟ್ ಪರೀಕ್ಷೆ ಅಥವಾ ಇನ್ನಾವುದೇ ಕುಂದು ಕೊರತೆಗಳ ಬಗೆಗೆ ವಿಚಾರಣೆಗಾಗಿ ಭಾರತೀಯ ವೈದ್ಯಕೀಯ ಮಂಡಳಿಯನ್ನು ಸಂಪರ್ಕಿಸಬೇಕು ಎಂದು ಅದು ಹೇಳಿದೆ.
ಹನ್ನೆರಡನೇ ತರಗತಿಗಳಲ್ಲಿ ಜೀವಶಾಸ್ತ್ರವನ್ನು ಒಂದು ವಿಷಯವಾಗುಳ್ಳವರು ಮತ್ತು ಮುಕ್ತ ಅಭ್ಯರ್ಥಿಗಳಿಂದ ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ (ನೀಟ್) ಸಂಬಂಧ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ)ಗೆ ಹಲವಾರು ದೂರುಗಳು ಬಂದಿದೆ. ಈ ಹಿನ್ನೆಲೆಯಲ್ಲಿ ಸಿಬಿಎಸ್ಇ ಈ ಸ್ಪಷ್ಟನೆ ನೀಡಿದೆ.
ಎಂಸಿಐ ಒದಗಿಸಿದ ಅರ್ಹತಾ ಮಾನದಂಡವನ್ನು ಆಧರಿಸಿ ನೀಟ್(ಯುಜಿ) ಪರೀಕ್ಷೆಗಳನ್ನು ನಡೆಸುವುದು ಸಿಬಿಎಸ್ಇಯ ಜವಾಬ್ದಾರಿಯಾಗಿದೆ. ಅಲ್ಲದೆ ನಾವು ಪರೀಕ್ಷೆಗೆ ಅರ್ಹತಾ ಮಾನದಂಡಗಳನ್ನು ನಿರ್ಧರಿಸುವಲ್ಲಿ ಯಾವ ಪಾತ್ರವನ್ನು ನಿರ್ವಹಿಸುವುದಿಲ್ಲ ಎಂದು ಸಿಬಿಎಸ್ಇ ತಿಳಿಸಿದೆ.
ಮುಕ್ತ ಕಲಿಕಾ ರಾಷ್ಟ್ರೀಯ ಸಂಸ್ಥೆ(ಎನ್ ಐಒಎಸ್) ಅಥವಾ ಸ್ಟೇಟ್ ಓಪನ್ ಸ್ಕೂಲ ಗಳಲ್ಲಿ ಕಲಿತಿರುವವರು, ಜೀವಶಾಸ್ತ್ರ, ಅಥವಾ ಜೈವಿಕ ತಂತ್ರಜ್ಞಾನವನ್ನು ಅಧ್ಯಯನ ವಿಷಯವಾಗಿ ಆಯ್ಕೆ ಮಾಡಿಕೊಂಡವರು ನೀಟ್ ಪರೀಕ್ಷೆ ಬರೆಯುವುದಕ್ಕೆ ಅನರ್ಹರಾಗಿದ್ದಾರೆ. ಇದೇ ವಿಚಾರವಾಗಿ ಸಾಕಷ್ಟು ದೂರುಗಳು ಸಿಬಿಎಸ್ಇ ಗೆ ಬಂದಿದ್ದು ಇದೀಗ ಆ ಎಲ್ಲಾ ದೂರುಗಳನ್ನು ಸಂಸ್ಥೆಯು ಮಂಡಳಿಗೆ ವಿಲೇವಾರಿ ಮಾಡಿದೆ.
ಮಂಡಳಿಗೆ ದೂರು ಅಥವಾ ಯಾವ ಸಂದೇಹದ ಕುರಿತಾಗಿ ಪ್ರಶ್ನೆಗಳನ್ನು ಕಳಿಸುವ ಮುನ್ನ ಅಭ್ಯರ್ಥಿಗಳು ನೀಟ್ ವೆಬ್ ಸೈಟಿನಲ್ಲಿ ಪ್ರಕಟಿಸಿರುವ ಬುಲೆಟಿನ್ ಹಾಗೂ ಎಫ್ ಎ ಕ್ಯೂ ಗಳನ್ನು ಓದಲು ಮರೆಯಬಾರದೆಂದು ಕೋರಲಾಗಿದೆ.
ಈ ವರ್ಷ ನೀಟ್ ಪರೀಕ್ಷೆಗಳು ಮೇ 6ರಂದು ನಡೆಯಲಿದ್ದು ಫೆ.8ರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭಗೊಂಡಿದೆ. ಅರ್ಜಿ ಸಲ್ಲಿಸಲು ಇದೇ ಮಾ.9 ಕಡೆಯ ದಿನಾಂಕವಾಗಿರಲಿದೆ. ಹಾಗೆಯೇ ನೀಟ್ ಪರೀಕ್ಷೆಗಾಗಿ ಆನ್ ಲೈನ್ ನಲ್ಲಿ ಶುಲ್ಕ ಪಾವತಿಸಲು ಮಾರ್ಚ್ 10 ಕಡೆಯ ದಿನವಾಗಿದ್ದು ಅಂದು ಬೆಳಗ್ಗೆ 11.50 ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಬಹುದಾಗಿರುತ್ತದೆ.