ನೌಕಾ ಮುಖ್ಯಸ್ಥ ಸುನಿಲ್ ಲಂಬಾ
ನವದೆಹಲಿ: ಭಾರತದ ನೌಕಾ ತರಬೇತಿ ಆಹ್ವಾನವನ್ನು ಮಾಲ್ಡೀವ್ಸ್ ದೇಶ ತಿರಸ್ಕರಿಸಿದೆ ಎಂದು ಭಾರತೀಯ ನೌಕಾ ದಳದ ಮುಖ್ಯಸ್ಥ ಸುನಿಲ್ ಲಂಬಾಹೇಳಿದ್ದಾರೆ.
ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುನಿಲ್ ಲಂಬಾಅವರು, ಇದೇ ಮಾರ್ಚ್ 6ರಿಂದ ಆರಂಭವಾಗಲಿರುವ ದ್ವೈವಾರ್ಷಿಕ ನೌಕಾ ತರಬೇತಿ ಮಿಲನ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮಾಲ್ಜೀವ್ಸ್ ದೇಶ ಸ್ಪಷ್ಟಪಡಿಸಿದೆ. ಆದರೆ ನೌಕಾ ತರಬೇತಿಯಲ್ಲಿ ಯಾವ ಕಾರಣಕ್ಕಾಗಿ ಪಾಲ್ಗೊಳ್ಳುತ್ತಿಲ್ಲ ಎಂಬ ಕಾರಣವನ್ನು ಆ ದೇಶ ನೀಡಿಲ್ಲ ಎಂದು ಲಂಬಾ ಹೇಳಿದ್ದಾರೆ.
ಇದೇ ವೇಳೆ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಚೀನಾ ಸೇನೆಯ ಚಟುವಟಿಕೆಗಳ ಕುರಿತು ಮಾತನಾಡಿದ ಲಂಬಾ, ಇದೇನೂ ಹೊಸದಲ್ಲ. ಈ ಹಿಂದಿನಿಂದಲೂ ಚೀನಾ ತನ್ನದಲ್ಲದ ಗಡಿಯಲ್ಲಿ ಸೇನಾ ಚಟುವಟಿಕೆ ನಡೆಸುತ್ತಿದೆ. ಈ ಬಗ್ಗೆ ನಮಗೆ ಅರಿವಿದ್ದು, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ದಕ್ಷಿಣ ಹಿಂದೂ ಮಹಾಸಾಗರದಲ್ಲಿ 8ರಿಂದ 10 ಯುದ್ಧ ನೌಕೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಅಲ್ಲದೆ ಚೀನಾ ಸೇನೆಯ ಚಟುವಟಿಕೆಗಳ ಮೇಲೂ ಕಣ್ಣಿಟ್ಟಿವೆ ಎಂದು ಲಂಬಾಹೇಳಿದರು.
ಚೀನಾ ಆತಂಕಕ್ಕೆ ಕಾರಣವಾಗಿರುವ ಮಿಲನ್ ನೌಕಾ ತರಬೇತಿ
ಇನ್ನು ಇದೇ ಮಾರ್ಚ್ 6 ರಿಂದ 13ರವೆರೆಗೂ ನಡೆಯಲಿರುವ ಮಿಲನ್ ನೌಕಾ ತರಬೇತಿ ಚೀನಾ ಸೇನೆಯ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಸ್ನೇಹ ಮತ್ತು ಸೌಹಾರ್ಧ ಸಂಬಂಧ ವೃದ್ಧಿಗಾಗಿ ಭಾರತ, ಅಮೆರಿಕ ಸೇರಿದಂತೆ ವಿವಿಧ ದೇಶಗಳ ಪಾಲ್ಗೊಳ್ಳುತ್ತಿರುವ ಈ ನೌಕಾ ತರಬೇತಿ ವಿವಿಧ ದೇಶಗಳ ನೌಕಾದಳಗಳ ಅಭಿಪ್ರಾಯ, ಭವಿಷ್ಯದ ಯೋಜನೆಗಳು ಮತ್ತು ನೌಕಾ ತಂತ್ರಜ್ಞಾನ ಮಾಹಿತಿ ವಿನಿಮಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಗುತ್ತದೆ. ಅಂತೆಯೇ ವಿವಿಧ ಭದ್ರತಾ ಸಮಸ್ಯೆಗಳ ಕುರಿತಂತೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದು ಭಾರತೀಯ ನೌಕಾದಳದ ವಕ್ತಾರ ಕ್ಯಾಪ್ಟನ್ ಶರ್ಮಾ ಹೇಳಿದರು.