ರಾಂಚಿ: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೇರಿ 15 ಅಪರಾಧಿಗಳ ಶಿಕ್ಷೆ ಪ್ರಮಾಣದ ತೀರ್ಪನ್ನು ಕೋರ್ಟ್ ನಾಳೆಗೆ ಮುಂದೂಡಿದೆ.
ಮೇವು ಹಗರಣಕ್ಕೆ ಸಂಬಂಧಿಸಿದ ಆರು ಪ್ರಕರಣಗಳ ಪೈಕಿ ಒಂದು ಪ್ರಕರಣದ 22 ಆರೋಪಿಗಳ ಪೈಕಿ ಲಾಲು ಪ್ರಸಾದ್ ಯಾದವ್ ಸೇರಿ 15 ಆರೋಪಿಗಳು ದೋಷಿ ಎಂದು ರಾಂಚಿ ಸಿಬಿಐ ವಿಶೇಷ ಕೋರ್ಟ್ ಕಳೆದ ಡಿಸೆಂಬರ್ 23ರಂದು ತೀರ್ಪು ನೀಡಿತ್ತು. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ನಾಳೆ ಘೋಷಿಸುವುದಾಗಿ ಹೇಳಿದ್ದಾರೆ.
ಇದೇ ಪ್ರಕರಣ ಸಂಬಂದ ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಸೇರಿ ಇತರೆ ಏಳು ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್ ಖುಲಾಸೆಗೊಳಿಸಿದ್ದರು.
ದೇವಗಡ ಖಜಾನೆಯಿಂದ 90 ಲಕ್ಷ ರುಪಾಯಿ ಹಣವನ್ನು ಅಕ್ರಮವಾಗಿ ಪಡೆದುಕೊಂಡಿರುವ ಈ ಪ್ರಕರಣದಲ್ಲಿ ಲಾಲು ಹಾಗೂ ಮಿಶ್ರಾ ಸೇರಿ 22 ಮಂದಿ ಆರೋಪಿಗಳಾಗಿದ್ದರು.
ಲಾಲು ಪುತ್ರ ತೇಜಸ್ವಿಗೆ ಸಿಬಿಐ ನೋಟಿಸ್
ರಾಂಚಿ ವಿಶೇಷ ಸಿಬಿಐ ಕೋರ್ಟ್ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್, ರಘುವಂಶ್ ಪ್ರಸಾದ್, ಮನೋಜ್ ಝಾಗೆ ನೋಟಿಸ್ ನೀಡಿದೆ. ಡಿಸೆಂಬರ್ 23ರಂದು ಸಿಬಿಐ ಕೋರ್ಟ್ ಲಾಲೂ ಪ್ರಸಾದ್ ಯಾದವ್ ಅಪರಾಧಿ ಎಂದು ಘೋಷಿಸಿತ್ತು. ಲಾಲು ಅಪರಾಧಿ ತೀರ್ಪು ಹೊರಬಂದ ಬೆನ್ನಲ್ಲೇ ತೇಜಸ್ವಿ, ರಘುವಂಶ್, ಮನೋಜ್ ತೀರ್ಪಿನ ವಿರುದ್ಧ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕೋರ್ಟ್ ಗೆ ಅಪಮಾನಿಸಿದ ಆರೋಪದಡಿ ಈ ಮೂವರಿಗೆ ನೋಟಿಸ್ ನೀಡಿದ್ದು ಜನವರಿ 23ಕ್ಕೆ ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics