ನವದೆಹಲಿ: ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ವಿಚಾರವಾಗಿ ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್ ಹಾಗೂ ಶಶಿ ತರೂರ್ ನಡುವೆ ವಾಗ್ವಾದ ನಡೆದಿದೆ.
ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಅವಶ್ಯಕತೆಯನ್ನು ಪ್ರಶ್ನಿಸಿದ್ದು, ಸುಷ್ಮಾ ಸ್ವರಾಜ್ ಶಶಿ ತರೂರ್ ಪ್ರಶ್ನೆಯನ್ನು ಅಜ್ಞಾನದ ಪ್ರಶ್ನೆ ಎಂದು ಹೇಳಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಸುಷ್ಮಾ ಸ್ವರಾಜ್, ವಿಶ್ವಸಂಸ್ಥೆಯಲ್ಲಿ ಹಿಂದಿ ಏಕೆ ಅಧಿಕೃತ ಭಾಷೆಯಾಗಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಪ್ರಕ್ರಿಯೆಯೇ ಇದಕ್ಕೆ ಇರುವ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಹಿಂದಿಯನ್ನು ವಿಶ್ವಸಂಸ್ಥೆಯಲ್ಲಿ ಅಧಿಕೃತ ಭಾಷೆಯನ್ನಾಗಿ ಮಾಡಬೇಕಾದರೆ 193 ರಾಷ್ಟ್ರಗಳ ಪೈಕಿ 129 ರಾಷ್ಟ್ರಗಳು ಅದರ ಪರವಾಗಿ ಮತ ಚಲಾವಣೆ ಮಾಡಬೇಕಾಗುತ್ತದೆ ಅಷ್ಟೇ ಅಲ್ಲದೇ ಆ ಪ್ರಕ್ರಿಯೆಗೆ ತಗುಲುವ ವೆಚ್ಚವನ್ನೂ ಸಹ ಹಂಚಿಕೊಳ್ಳಬೇಕಾಗುತ್ತದೆ, ಬೆಂಬಲ ನೀಡುವುದರ ಹೊರತುಪಡಿಸಿದರೆ ಆರ್ಥಿಕ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಇದು ಹೊರೆಯಾಗಿ ಅಂತಹ ರಾಷ್ಟ್ರಗಳು ಈ ಪ್ರಕ್ರಿಯೆಯಿಂದ ದೂರ ಉಳಿಯುತ್ತವೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ರಾಷ್ಟ್ರ ಭಾಷೆಯೂ ಅಲ್ಲದ ಹಿಂದಿಯನ್ನು ವಿಶ್ವಸಂಸ್ಥೆಯಲ್ಲಿ ಅಧಿಕೃತವೆಂದು ಘೋಷಿಸುವಂತೆ ಮಾಡುವುದರ ಅವಶ್ಯಕತೆಯನ್ನು ಶಶಿ ತರೂರ್ ಪ್ರಶ್ನಿಸಿದ್ದು, ನಮಗೆ ವಿಶ್ವಸಂಸ್ಥೆಯಲ್ಲಿ ಅಧಿಕೃತ ಭಾಷೆ ಬೇಕಾ ಎಂದು ಪ್ರಶ್ನಿಸಿದ್ದಾರೆ? ಹಿಂದಿಯನ್ನು ಮಾತನಾಡುವಷ್ಟು ಜನರು ಅರೇಬಿಕ್ ನ್ನು ಮಾತನಾಡುವುದಿಲ. ಆದರೆ 22 ರಾಷ್ಟ್ರಗಳಲ್ಲಿ ಅರೇಬಿಕ್ ನ್ನು ಮಾತನಾಡುತ್ತಾರೆ. ಆದರೆ ಹಿಂದಿಯನ್ನು ಕೇವಲ ನಮ್ಮ ರಾಷ್ಟ್ರ ಮಾತ್ರ ಅಧಿಕೃತ ಭಾಷೆಯಾಗಿ ಬಳಕೆ ಮಾಡುತ್ತಿದೆ. ಈ ರೀತಿ ಇದ್ದಾಗ ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯೆಂದು ಘೋಷಿಸುವುದಕ್ಕೆ ಯತ್ನಿಸುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಒಂದು ವೇಳೆ ವಿಶ್ವಸಂಸ್ಥೆಯಲ್ಲಿ ಹಿಂದಿ ಅಧಿಕೃತ ಭಾಷೆಯಾದರೆ ತಮಿಳುನಾಡಿನವರು ಪ್ರಧಾನಿಗಳಾದಾಗ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಹಿಂದಿ ಮಾತನಾಡುವವರಿಗೆ ಹಿಂದಿಯ ಮೇಲೆ ಇರುವ ಗೌರವ ಅರ್ಥವಾಗುತ್ತದೆ. ಆದರೆ ಹಿಂದಿ ಮಾತನಾಡದವರಿಗೂ ಸಹ ಭಾರತೀಯರೆಂಬ ಹೆಮ್ಮೆ ಇದೆ ಎಂದು ಶಶಿ ತರೂರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics