ನವದೆಹಲಿ: ಪಾಕಿಸ್ತಾನ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಈ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪಾಕಿಸ್ತಾನ ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಹಾಗೂ ಸುಳ್ಳುಗಳನ್ನೇ ಸತ್ಯ ಎಂದು ಬಿಂಬಿಸುವ ತನ್ನ ಪರಿಪಾಠವನ್ನು ಮುಂದುವರಿಸಿದೆ ಎಂದು ಗುರುವಾರ ಕಿಡಿ ಕಾರಿದೆ.
ಕುಲಭೂಷಣ್ ಜಾಧವ್ ವಿಡಿಯೋ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ಈ ವಿಡಿಯೋ ಮೂಲಕ ಪಾಕಿಸ್ತಾನ ಮತ್ತೊಮ್ಮೆ ತನ್ನ ಕಿಡಿಗೇಡಿತನ ತೋರಿಸಿದೆ. ಈ ವಿಡಿಯೋದಿಂದ ನಮಗೆ ಯಾವುದೇ ಅಚ್ಚರಿಯಾಗಿಲ್ಲ ಎಂದಿದೆ.
ಪಾಕಿಸ್ತಾನ ಕಿತಾಪತಿ ಮಾಡುತ್ತದೆ ಎಂಬುದು ಗೊತ್ತಿತ್ತು. ಈ ರೀತಿಯ ಸಂಚು ರೂಪಿಸುವುದರಲ್ಲಿ ಪಾಕ್ ಎತ್ತಿದ ಕೈ, ಒತ್ತಾಯ ಪೂರ್ವಕವಾಗಿ ಹೇಳಿಕೆಗಳನ್ನು ಹೇಳಿಸುವುದು ಅದಕ್ಕೆ ಗೊತ್ತಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಪಾಕಿಸ್ತಾನ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಜಾಧವ್ ಕೆಲವು ಆತಂಕಕಾರಿ ವಿಷಯಗಳನ್ನು ಹೇಳಿರುವುದು ಪ್ರಸಾರವಾಗಿದೆ. ನನ್ನ ತಾಯಿ ಮತ್ತು ಪತ್ನಿ ಜತೆಗಿದ್ದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಬೆದರಿಕೆ ಹಾಕುತ್ತಿರುವುದನ್ನು ನೋಡಿದೆ ಎಂದು ಜಾಧವ್ ಹೇಳಿಕೊಂಡಿರುವ ವಿಡಿಯೋವನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics