ರಾಂಚಿ: ಬಹುಕೋಟಿ ಮೇವು ಹಗರಣ ಸಂಬಂಧ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ವಿರುದ್ಧ ಪ್ರಕರಣ ನಿರ್ಣಾಯಕ ಹಂತ ತಲುಪಿರುವಂತೆಯೇ, ಅತ್ತ ಲಾಲು ಪ್ರಸಾದ್ ಯಾದವ್ ರಾಂಚಿ ಕೋರ್ಟ್ ನ ನ್ಯಾಯಾಧೀಶರಿಗೆ ನಾನೂ ಕೂಡ ತರಬೇತಿ ಪಡೆದ ವಕೀಲ ಎಂದು ಹೇಳಿದ್ದಾರೆ.
ಮೇವುಹಗರಣಕ್ಕೆ ಸಂಬಂಧಿಸಿ ಲಾಲೂಪ್ರಸಾದ್ ಗೆ ಶಿಕ್ಷೆಯ ಪ್ರಮಾಣ ನಿರ್ಧರಿಸಲು ರಾಂಚಿಯ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಈ ವೇಳೆ ವಿಚಾರಣೆಗೆ ಹಾಜರಾಗಿದ್ದ ಲಾಲೂ ಜೈಲಲ್ಲಿ ತುಂಬಾ ಚಳಿ ಆಗುತ್ತಿದೆ ಎಂದು ನ್ಯಾಯಾಧೀಶರಿಗೆ ಹೇಳಿದರು. ಇದಕ್ಕೆ ಅದೇ ಧಾಟಿಯಲ್ಲಿ ಉತ್ತರಿಸಿದ ನ್ಯಾಯಾಧೀಶ ಶಿವ್‌ಪಾಲ್ ಸಿಂಗ್ ಅವರು, 'ಹಾಗಿದ್ದರೆ ತಬಲಾ ಬಾರಿಸಿ' ಎಂದು ಉತ್ತರಿಸಿದರು. ಬಳಿಕ ವಿಚಾರಣೆ ಆರಂಭಗೊಂಡು ಕಲಾಪದ ಮಧ್ಯೆ ನ್ಯಾಯಾಧೀಶರು, ತಾನು ಈ ಮೇವು ಹಗರಣದ ದಾಖಲೆ ಪರಿಶೀಲಿಸಿದ್ದೇನೆ. ಸರ್ಕಾರ ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿದ್ದ ನೀವು ಸೂಕ್ತವಾಗಿ ನಡೆದುಕೊಳ್ಳಲಿಲ್ಲ ಎಂದು ಲಾಲೂ ಪ್ರಸಾದ್ ರನ್ನುದ್ದೇಶಿಸಿ ನ್ಯಾಯಾಧೀಶರು ಹೇಳಿದರು.
ಆಗ ತನ್ನ ಎಂದಿನ ವಿಶಿಷ್ಟವಾದ ಶೈಲಿಯ ನಗೆ ಬೀರಿದ ಲಾಲೂ ಪ್ರಸಾದ್, ನಾನೂ ಕೂಡಾ ಓರ್ವ ವಕೀಲ ಎಂದು ಉತ್ತರಿಸಿದರು. ಅಂತೆಯೇ ನನ್ನ ವಕೀಲರಿಂದ ಕೆಲ ಸಲಹೆಗಳನ್ನು ಪಡೆದಿದ್ದೇನೆ ಎಂದು ಹೇಳಿದರು. ಆರ್‌ಜೆಡಿ ಮುಖ್ಯಸ್ಥ ರಘುವಂಶ ಯಾದವ್, ಲಾಲೂಪ್ರಸಾದ್ ಪುತ್ರ ತೇಜಸ್ವಿ ಯಾದವ್, ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಹಾಗೂ ಆರ್‌ಜೆಡಿ ಮುಖಂಡ ಶಿವಾನಂದ್ ತಿವಾರಿ ವಿರುದ್ಧ ನ್ಯಾಯಾಂಗನಿಂದನೆ ನೋಟಿಸ್ ಜಾರಿಯಾಗಿರುವುದನ್ನು ನ್ಯಾಯಾಧೀಶರು ಲಾಲೂಪ್ರಸಾದ್ ಗಮನಕ್ಕೆ ತಂದರು. ಆಗ ನೋಟೀಸನ್ನು ರದ್ದುಗೊಳಿಸುವಂತೆ ಲಾಲೂ ಪ್ರಸಾದ್ ಮನವಿ ಮಾಡಿದರು. ಅಂತೆಯೇ ಹೊರಗೆ ನಡೆಯುವಾಗ ಲಾಲೂ ಪ್ರಸಾದ್ ನ್ಯಾಯಾಧೀಶರನ್ನು ಉದ್ದೇಶಿಸಿ ‘ಶಾಂತಚಿತ್ತರಾಗಿ’ ಯೋಚಿಸಿ ನಿರ್ಧರಿಸುವಂತೆ ಲಾಲೂಪ್ರಸಾದ್ ನ್ಯಾಯಾಧೀಶರನ್ನು ಒತ್ತಾಯಿಸಿದರು.
ಇನ್ನು ಮೇವು ಹಗರಣ ಸಂಬಂಧ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ಇಂದು ಘೋಷಣೆ ಮಾಡಲಿದ್ದು, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಾದ ವಿವಾದ ಆಲಿಸುವ ಆಯ್ಕೆ ತನ್ನ ಎದುರಿದೆ ಎಂದು ನ್ಯಾಯಾಧೀಶರು ತಿಳಿಸಿದಾಗ, ವೈಯಕ್ತಿಕವಾಗಿ ಹಾಜರಿದ್ದು ವಿಚಾರಣೆ ನಡೆಸುವಂತೆ ಲಾಲೂ ಕೋರಿದರು. ಅಂತೆಯೇ ಲಾಲೂ ಪ್ರಸಾದ್ ಪಾಟ್ನಾ ವಿವಿಯಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ.