ಲಖನೌ: ಆಲೂಗಡ್ಡೆಗೆ ಬೆಂಬಲ ನೀಡುಬೇಕು ಎಂದು ಒತ್ತಾಯಿಸಿ ಉತ್ತರ ಪ್ರದೇಶ ರೈತರು ಶನಿವಾರ ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸ ಹಾಗೂ ವಿಧಾನಸಭೆ ಮುಂದೆ ಆಲೂಗಡ್ಡೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಭಾರಿ ಭದ್ರತೆ ಇರುವ ಮುಖ್ಯಮಂತ್ರಿ ನಿವಾಸ, ವಿಧಾನಸಭೆ ಹಾಗೂ ರಾಜಭವನದ ಮುಂದೆ ಆಲೂಗಡ್ಡೆ ಎಸೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ಭಾರಿ ಭದ್ರತೆ ಇರುವ ಪ್ರದೇಶದಲ್ಲೇ ರೈತರು ಈ ರೀತಿ ಮಾಡಿರುವುದು ಪೊಲೀಸರ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ರಸ್ತೆಗಳಿಗೆ ಆಲೂಗಡ್ಡೆ ಎಸೆಯುತ್ತಿರುವ ರೈತರ ವಾಹನಗಳನ್ನು ಗುರುತಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಲಖನೌ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ಅವರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು, ನಾವು ಯಾವುದೇ ತಪ್ಪು ಮಾಡಿಲ್ಲ. ಇದೊಂದು ಎಚ್ಚರಿಕೆ ಮತ್ತು ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ನಡೆಸಿದ ಸಾಂಕೇತಿಕ ಪ್ರತಿಭಟನೆ ಅಷ್ಟೇ ಎಂದು ಹೇಳಿದ್ದಾರೆ.
ಆಲೂಗಡ್ಡೆ ಬೆಲೆ ಪಾತಾಳಕ್ಕೆ ಕುಸಿದಿದೆ. ಇದನ್ನು ನಿಯಂತ್ರಿಸಲು ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ಕೆಜಿ ಆಲೂಗಡ್ಡೆಗೆ 3ರಿಂದ 4 ರುಪಾಯಿ ನೀಡಲಾಗುತ್ತಿದೆ. ಆದರೆ ಕೆಜಿ ಗೆ ಕನಿಷ್ಠ 10 ರುಪಾಯಿ ನಿಗದಿ ಮಾಡುವಂತೆ ನಾವು ಒತ್ತಾಯಿಸಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.