1 ಅಬೋವ್ ಪಬ್ ಮಾಲೀಕರ ಭಾವಚಿತ್ರವಿರುವ ಪೋಸ್ಟರ್
ಮುಂಬೈ: ಮುಂಬೈನ ಕಮಲಾ ಮಿಲ್ಸ್ ಕಾಪೌಂಡ್ ನಲ್ಲಿನ ಪಬ್ ನಲ್ಲಿ ನಡೆದ ಅಗ್ನಿ ದುರಂತ ಸಂಬಂಧ ಪಬ್ ಮಾಲೀಕರ ಬಂಧನಕ್ಕಾಗಿ ಬಲೆ ಬೀಸಿರುವ ಪೊಲೀಸರು ಅವರ ಭಾವಚಿತ್ರಗಳಿರುವ ಪೋಸ್ಟರ್ ಹಾಕಿದ್ದಾರೆ.
ಕಳೆದ ಡಿಸೆಂಬರ್ 29ರಂದು 14 ಮಂದಿಯ ಸಾವಿಗೆ ಕಾರಣವಾದ ಮುಂಬೈನ ಕಮಲಾ ಮಿಲ್ಸ್ ಕಾಪೌಂಡ್ ನಲ್ಲಿರುವ ರೂಫ್ ಟಾಪ್ ಪಬ್ ನ ಮಾಲೀಕರ ಬಂಧನಕ್ಕಾಗಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಪಬ್ ಮಾಲೀಕರ ಬಂಧನಕ್ಕಾಗಿ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಮುಂಬೈನ ಮಡಗಾಂವ್ ಜನವಸತಿ ಪ್ರದೇಶದ ಗೇಟ್ ಗೆ ಈ ಪೋಸ್ಟರ್ ಅನ್ನು ಅಂಟಿಸಲಾಗಿದ್ದು, ಪೋಸ್ಟರ್ ನಲ್ಲಿ 1 ಅಬೋವ್ ಪಬ್ ಮಾಲೀಕರ ಭಾವ ಚಿತ್ರಗಳನ್ನು ಮುದ್ರಿಸಲಾಗಿದೆ.
ಇಂದು ಬೆಳಗ್ಗೆಯಷ್ಟೇ ಅಗ್ನಿ ದುರಂತ ಪ್ರಕರಣದ ತನಿಖಾಧಿಕಾರಿಗಳು ಮುಂಬೈ ಮಹಾನಗರ ಪಾಲಿಕೆ ಆಯುಕ್ತರಿಗೆ ಅಗ್ನಿ ದುರಂತದ ವರದಿ ನೀಡಿದ್ದರು. ವರದಿಯಲ್ಲಿ ಅಗ್ನಿ ದುರಂತಕ್ಕೆ ರೂಫ್ ಟಾಪ್ ಪಬ್ ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಹುಕ್ಕಾಗಳು ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ಅಗ್ನಿ ದುರಂತಕ್ಕೆ ಒಳಪಟ್ಟ ರೂಫ್ ಟಾಪ್ ಪಬ್ ಗಳಾದ ಮೋಜೋಸ್ ಬಿಸ್ಟ್ರೋ ಮತ್ತು 1 ಅಬೋವ್ ಪಬ್ ಗಳೆರಡೂ ಪಾಲಿಕೆ ನಿಯಮವನ್ನು ಗಾಳಿಗೆ ತೂರಿ ಅಕ್ರಮವಾಗಿ ಅನುಮತಿ ಇಲ್ಲದೇ ಹುಕ್ಕಾ ಬಾರ್ ಗಳನ್ನು ನಡೆಸುತ್ತಿದ್ದವು. ಆದರೆ ಈ ಬಗ್ಗೆ ಯಾವುದೇ ರೀತಿಯ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಅಧಿಕಾರಿಗಳು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.