ಚೆನ್ನೈ: ವೇತನ ಪರಿಷ್ಕರಣೆ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್(ಎಂಟಿಸಿ)ನ ಸಿಬ್ಬಂದಿ ಚೆನ್ನೈನಲ್ಲಿ ನಡೆಸುತ್ತಿರುವ ಮುಷ್ಕರ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮದ್ರಾಸ್ ಹೈಕೋರ್ಟ್ ಎಚ್ಚರಿಕೆಗೂ ಜಗ್ಗದ ತಮಿಳುನಾಡು ಸಾರಿಗೆ ನೌಕರರ ಒಕ್ಕೂಟ ತನ್ನ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಸಿದೆ.
ಸಾರಿಗೆ ನೌಕರರ ಬಸ್ ಮುಷ್ಕರದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದ್ದು, ವಿವಿಧ ಬಸ್ ನಿಲ್ದಾಗಳಲ್ಲಿ ಜನ ಖಾಸಗಿ ಬಸ್ ಗಳಿಗಾಗಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬರುತ್ತಿದೆ. ಹಲವು ರಸ್ತೆಗಳ ಬದಿಯಲ್ಲೇ ಬಸ್ ಗಳನ್ನು ನಿಲುಗಡೆ ಮಾಡಿದ್ದರಿಂದ ಸಂಚಾರ ದಟ್ಟಣೆ ಕೂಡ ಏರ್ಪಟ್ಟಿತು. ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳಲ್ಲಿ ತೆರಳಬೇಕಾಗಿದೆ.
ಸಾರಿಗೆ ನೌಕರರು ವೇತನ 30 ಸಾವಿರ ರುಪಾಯಿಗೆ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದಿದ್ದು, ಈ ಸಂಬಂಧ ಸಾರಿಗೆ ಸಚಿವ ಎಂಆರ್ ವಿಜಯ್ ಭಾಸ್ಕರ್ ಅವರು ಸಾರಿಗೆ ನೌಕರರ ಒಕ್ಕೂಟದೊಂದಿಗೆ ನಡೆಸಿದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಕಳೆದ ಗುರುವಾರಿಂದ ದಿಢೀರ್ ಬಸ್ ಮುಷ್ಕರ ನಡೆಸಲಾಗುತ್ತಿದೆ.
ಸಾರಿಗೆ ಸಚಿವರು ನೌಕರರಿಗೆ 24 ಸಾವಿರ ರುಪಾಯಿ ವೇತನ ನೀಡಲು ಒಪ್ಪಿಗೆ ನೀಡಿದ್ದಾರೆ. ಆದರೆ ಇದಕ್ಕೆ ಸಾರಿಗೆ ನೌಕರರು ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಮುಷ್ಕರ ಮುಂದುವರೆದಿದೆ.
ನಿನ್ನೆಯಷ್ಟೇ ಮದ್ರಾಸ್ ಹೈಕೋರ್ಟ್ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಈ ಕೂಡಲೇ ಎರಡು ದಿನಗಳ ಮುಷ್ಕರ ಹಿಂಪಡೆಯುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು. ಆದರೆ ಹೈಕೋರ್ಟ್ ಆದೇಶಕ್ಕೂ ಜಗ್ಗದ ಸಾರಿಗೆ ನೌಕರರ ಒಕ್ಕೂಟ, ತಮಿಳುನಾಡು ಸರ್ಕಾರ ತಮ್ಮ ಬೇಡಿಕೆ ಈಡೇರಿಸುವವರೆಗೆ ಮುಷ್ಕರ ಮುಂದುವರೆಸುವುದಾಗಿ ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics