ನವದೆಹಲಿ: ಆಧಾರ್ ವಿವರಗಳು 500 ರೂಪಾಯಿಗಳಿಗೆ ಮಾರಾಟವಾಗುತ್ತಿರುವುದರ ಬಗ್ಗೆ ವರದಿ ಪ್ರಕಟಿಸಿದ್ದ ದಿ ಟ್ರಿಬ್ಯೂನ್ ಪತ್ರಿಕೆ ವರದಿಗಾರ್ತಿ ವಿರುದ್ಧ ಎಫ್ಐಆರ್ ದಾಖಲಾಗಿರುವುದನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡಿಸಿದೆ.
ಪ್ರೆಸ್ ಕ್ಲಬ್ ಹಾಗೂ ಪತ್ರಕರ್ತರ ಸಂಘಟನೆ ಎಫ್ಐಆರ್ ನ್ನು ಮಾಧ್ಯಮ ಸ್ವಾತಂತ್ರ್ಯದ ಮೇಲಾಗಿರುವ ಗದಾ ಪ್ರಹಾರ ಎಂದು ಹೇಳಿದ್ದು, ಪ್ರಕರಣವನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿವೆ. ಪ್ರೆಸ್ ಕ್ಲಬ್ ಜೊತೆಗೆ ಇಂಡಿಯನ್ ಭಾರತೀಯ ಮಹಿಳಾ ಪ್ರೆಸ್ ಕಾರ್ಪ್ಸ್ (ಐಡಬ್ಲ್ಯೂಪಿಸಿ) ಹಾಗೂ ಪ್ರೆಸ್ ಅಸೋಸಿಯೇಷನ್ ಕೂಡ ವರದಿಗಾರ್ತಿಯ ಮೇಲೆ ದಾಖಲಾಗಿರುವ ಎಫ್ಐಆರ್ ನ್ನು ಖಂಡಿಸಿದ್ದು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
ವರದಿಗಾರ್ತಿ ರಚನಾ ಖೈರಾ ಆರು ತಿಂಗಳ ಕಾಲ ತನಿಖೆ ನಡೆಸಿ ದೇಶದ ಕೋಟ್ಯಾಂತರ ಭಾರತೀಯರ ಆಧಾರ್ ಮಾಹಿತಿ ಸೋರಿಕೆಯಾಗಿರುವ ಕುರಿತು ಇತ್ತೀಚೆಗೆ ವರದಿ ಪ್ರಕಟಿಸಿದ್ದರು. ನಿಯಮ ಉಲ್ಲಂಘನೆ ಆರೋಪದ ಮೇಲೆ ಯುಐಡಿಎಐ ಉಪನಿರ್ದೇಶಕರು ಟ್ರಿಬ್ಯೂನ್ ಪತ್ರಿಕೆ ಹಾಗೂ ರಚನಾ ಖೈರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ತನಿಖೆ ವೇಳೆ ರಚನಾ ಜತೆ ಸಂಪರ್ಕದಲ್ಲಿದ್ದ ಇನ್ನು ಮೂವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಯುಐಡಿಎಐ ಇವರೆಲ್ಲರ ವಿರುದ್ಧ ಎಫ್ಐಆರ್ ದಾಖಲಿಸಿರುವುದರಿಂದ ನಾವು ಅವರನ್ನು ಹೆಸರನ್ನು ಬಹಿರಂಗಗೊಳಿಸುವಂತಿಲ್ಲ. ಸದ್ಯ ತನಿಖೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅವರ ಹೆಸರನ್ನು ಬಹಿರಂಗಪಡಿಸುವುದಾಗಿ ಕ್ರೈಂ ಬ್ರಾಂಚ್ ನ ಜಂಟಿ ಆಯುಕ್ತರಾದ ಅಲೋಕ್ ಕುಮಾರ್ ತಿಳಿಸಿದ್ದಾರೆ.