ಚೆನ್ನೈ: ವೇತನ ಪರಿಷ್ಕರಣೆ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಒಕ್ಕೂಟ ನಡೆಸುತ್ತಿರುವ ಮುಷ್ಕರ ಸೋಮವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯಾದ್ಯಂತ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.
ನಿನ್ನೆಯಷ್ಟೇ ಡಿಎಂಕೆ ಕಾರ್ಯಾಧ್ಯಕ್ಷ ಎಂಕೆ ಸ್ಟಾಲಿನ್ ಅವರು ಸಾರಿಗೆ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರಿಗೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ
ಸಾರಿಗೆ ಸಚಿವ ಎಂಆರ್ ವಿಜಯಬಾಸ್ಕರ್ ಅವರು ಮುಷ್ಕರ ಹಿಂಪಡೆಯುವಂತೆ ಸಾರಿಗೆ ನೌಕರರಿಗೆ ಮನಿವ ಮಾಡಿದ್ದರು.
ಸಚಿವರ ಮನವಿ ಜಗ್ಗದ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರೆಸಿದ್ದು, ರಾಜ್ಯ ಸರ್ಕಾರ ತಾತ್ಕಾಲಿಕ ಚಾಲಕರನ್ನು ನೇಮಕ ಮಾಡುವ ಮೂಲಕ ಶೇ.20ರಷ್ಟು ಬಸ್ ಗಳನ್ನು ರಸ್ತೆಗಿಳಿಸಿದೆ.
ಸಾರಿಗೆ ನೌಕರರ ಬಸ್ ಮುಷ್ಕರದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದ್ದು, ವಿವಿಧ ಬಸ್ ನಿಲ್ದಾಗಳಲ್ಲಿ ಜನ ಖಾಸಗಿ ಬಸ್ ಗಳಿಗಾಗಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬರುತ್ತಿದೆ. ಹಲವು ರಸ್ತೆಗಳ ಬದಿಯಲ್ಲೇ ಬಸ್ ಗಳನ್ನು ನಿಲುಗಡೆ ಮಾಡಿದ್ದರಿಂದ ಸಂಚಾರ ದಟ್ಟಣೆ ಕೂಡ ಏರ್ಪಟ್ಟಿತು. ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳಲ್ಲಿ ತೆರಳಬೇಕಾಗಿದೆ.
ಸಾರಿಗೆ ನೌಕರರು ವೇತನ 30 ಸಾವಿರ ರುಪಾಯಿಗೆ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದಿದ್ದು, ಈ ಸಂಬಂಧ ಸಾರಿಗೆ ಸಚಿವ ಎಂಆರ್ ವಿಜಯ್ ಭಾಸ್ಕರ್ ಅವರು ಸಾರಿಗೆ ನೌಕರರ ಒಕ್ಕೂಟದೊಂದಿಗೆ ನಡೆಸಿದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಕಳೆದ ಗುರುವಾರಿಂದ ದಿಢೀರ್ ಬಸ್ ಮುಷ್ಕರ ನಡೆಸಲಾಗುತ್ತಿದೆ.
ಸಾರಿಗೆ ಸಚಿವರು ನೌಕರರಿಗೆ 24 ಸಾವಿರ ರುಪಾಯಿ ವೇತನ ನೀಡಲು ಒಪ್ಪಿಗೆ ನೀಡಿದ್ದಾರೆ. ಆದರೆ ಇದಕ್ಕೆ ಸಾರಿಗೆ ನೌಕರರು ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಮುಷ್ಕರ ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics