ಶಂಕಿತ ಉಗ್ರ ಕವಾ (ಸಂಗ್ರಹ ಚಿತ್ರ)
ನವದೆಹಲಿ: 2000 ಇಸವಿಯಲ್ಲಿ ರಾಜಧಾನಿ ದೆಹಲಿಯಲ್ಲಿ ಕೆಂಪುಕೋಟೆ ಮೇಲೆ ನಡೆದಿದ್ದ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಎಟಿಎಸ್ ಅಧಿಕಾರಿಗಳು ಗುರುವಾರ ಶಂಕಿತ ಉಗ್ರನೋರ್ವನನ್ನು ಬಂಧಿಸಿದ್ದಾರೆ.
ಶಂಕಿತ ಉಗ್ರ ಬಿಲಾಲ್ ಅಹ್ಮದ್ ಕವಾ ಶ್ರೀನಗರದಿಂದ ದೆಹಲಿಗೆ ಆಗಮಿಸುತ್ತಿರುವ ಖಚಿತ ಮಾಹಿತಿ ಪಡೆದಿದ್ದ ಗುಜರಾತ್ ಎಟಿಎಸ್ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಯಾಚರಣೆ ನಡೆಸಿ ನಿನ್ನೆ ಸಂಜೆ ಬಂಧಿಸಿದ್ದಾರೆ. ದೆಹಲಿ ಏರ್ ಪೋರ್ಟ್ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿದ್ದ ದೆಹಲಿ ಪೊಲೀಸರು ಕವಾ ಆಗಮಿಸುತ್ತಿದ್ದಂತೆಯೇ ಆತನ ವಶಕ್ಕೆ ಪಡೆದು ಬಳಿಕ ಗುಜರಾತ್ ಎಟಿಎಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಶಂಕಿತ ಉಗ್ರ ಕವಾನನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಕೆಂಪುಕೋಟೆ ದಾಳಿ ಪ್ರಕರಣದಲ್ಲಿ ಶಂಕಿತ ಆರೋಪಿ ಎಂದು ಗುರುತಿಸಿದ್ದು, ಇದೀಗ ಆತನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪ್ರಸ್ತುತ ಬಂಧನಕ್ಕೀಡಾಗಿರುವ ವ್ಯಕ್ತಿ ಶಂಕಿತ ಉಗ್ರ ಕವಾ ಆಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸುತ್ತಿದ್ದು, ವಿಚಾರಣೆ ಬಳಿಕ ಇದು ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2000ನೇ ಇಸವಿಯ ಡಿಸೆಂಬರ್ 22ರಂದು ಕೆಂಪುಕೋಟೆ ಮೇಲೆ ನಡೆದಿದ್ದ ಉಗ್ರ ದಾಳಿಯಲ್ಲಿ ಓರ್ವ ಸೈನಿಕ ಸೇರಿದಂತೆ ಮೂವರು ಸಾವನ್ನಪ್ಪಿದ್ದರು.