ದೇಶ

ಗೋವು ರಕ್ಷಣೆ ಓಕೆ, ಆದ್ರೆ ಮಾನವರ ರಕ್ಷಣೆ ಯಾರು ಮಾಡಬೇಕು?: ಕೇಂದ್ರ ಸಚಿವ ಅತವಾಲೆ

Lingaraj Badiger
ಹೈದರಬಾದ್: ದಲಿತರು ಕೇವಲ ತಮ್ಮ ಮೇಲಿನ ದಾಳಿಯನ್ನು ಮಾತ್ರ ಖಂಡಿಸುತ್ತಿದ್ದಾರೆ. ಆದರೆ ಗೋವು ರಕ್ಷಕರ ಹೆಸರಿನಲ್ಲಿ ನಡೆಯುತ್ತಿರುವ ಅಮಾಯಕರ ಮೇಲಿನ ದಾಳಿಯನ್ನು ಖಂಡಿಸುತ್ತಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅತವಾಲೆ ಅವರು ಹೇಳಿದ್ದಾರೆ.
ಇತ್ತೀಚಿನ ಮಹಾರಾಷ್ಟ್ರದ ಭೀಮಾ ಕೋರೆಗಾಂವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಲಿತರು ತಮ್ಮ ಮೇಲಿನ ದಾಳಿಗೆ ಮಾತ್ರ ಪ್ರತಿಕ್ರಿಯಿಸುತ್ತಾರೆ ಎಂಬ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವರು, ನನ್ನ ಹೇಳಿಕೆಯ ಅರ್ಥ, ತಮ್ಮ ಮೇಲೆ ನಡೆಯುವ ನಿರಂತರ ದಾಳಿಗೂ ದಲಿತರು ಪ್ರತಿಕ್ರಿಯಿಸಬೇಕು. ಮೌನವಾಗಿ ಕುಳಿತುಕೊಳ್ಳಬಾರದು ಎಂದಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲೆ ದಾಳಿಗಳು ಹೆಚ್ಚಾಗಿವೆ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮದಾಸ್ ಅತವಾಲೆ ಅವರು, ದೇಶದಲ್ಲಿ ಜಾತಿ ಪದ್ಧತಿಯ ಅಸ್ತಿತ್ವ ಉಳಿಸಿಕೊಳ್ಳುವುದಾಗಿ ಕೆಲವು ಗುಂಪುಗಳು ಅನಗತ್ಯವಾಗಿ ಈ ಘಟನೆಯನ್ನು ರಾಜಕೀಯಗೊಳಿಸುತ್ತಿವೆ ಎಂದರು.
ಗೋವು ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳನ್ನು ಸಹ ನಾವು ಖಂಡಿಸಬೇಕಾಗಿದೆ. ಗೋವು ರಕ್ಷಣೆ ಮಾಡುವುದು ಓಕೆ. ಆದರೆ ಮಾನವರನ್ನು ಯಾರು ರಕ್ಷಣೆ ಮಾಡಬೇಕು? ಎಂದು ಅತವಾಲೆ ಪ್ರಶ್ನಿಸಿದ್ದಾರೆ. ಅಲ್ಲದೆ ಗೋವು ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸಹ ಖಂಡಿಸಿದ್ದಾರೆ ಎಂದರು.
SCROLL FOR NEXT