ದೇಶ

ಸಿಎಂ ಯೋಗಿ ಮನೆ ಮುಂದೆ ಆಲೂಗಡ್ಡೆ ಎಸೆದ ಪ್ರಕರಣ: ಇಬ್ಬರು ಎಸ್ಪಿ ಕಾರ್ಯಕರ್ತರ ಬಂಧನ

Lingaraj Badiger
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸ ಹಾಗೂ ವಿಧಾನಸಭೆ ಮುಂದೆ ರೈತರು ಆಲೂಗಡ್ಡೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಪೊಲೀಸರು ಸಮಾಜವಾದಿ ಪಕ್ಷದ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಭಾರಿ ಭದ್ರತೆ ಇರುವ ಮುಖ್ಯಮಂತ್ರಿ ನಿವಾಸ, ವಿಧಾನಸಭೆ ಹಾಗೂ ರಾಜಭವನದ ಮುಂದೆ ಆಲೂಗಡ್ಡೆ ಎಸೆದ ಘಟನೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಕನೌಜ್ ನಲ್ಲಿ ಇಬ್ಬರನ್ನು ಬಂಧಿಸಿದ್ದು, ಆರೋಪಿಗಳನ್ನು ಇಂದು ಲಖನೌ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಐಪಿಗಳ ಮನೆ ಮುಂದೆ ಟನ್ ಗಟ್ಟೆಲೆ ಆಲೂಗಡ್ಡೆ ಎಸೆದ ಘಟನೆ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಅಲ್ಲದೆ ಈ ಘಟನೆಯ ಹಿಂದೆ ಪ್ರಮುಖ ಪ್ರತಿಪಕ್ಷ ಎಸ್ಪಿಯ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿತ್ತು. ಅಲ್ಲದೆ ಭಾರಿ ಭದ್ರತೆ ಇರುವ ಪ್ರದೇಶದಲ್ಲೇ ರೈತರು ಈ ರೀತಿ ಮಾಡಿರುವುದು ಪೊಲೀಸರ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿತ್ತು.
ಇನ್ನು ತಮ್ಮ ಪಕ್ಷದ ಕಾರ್ಯಕರ್ತರ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಒಂದು ವೇಳೆ ಅವರು ಆಲೂಗಡ್ಡೆ ಎಸೆದಿದ್ದು ನಿಜವಾದರೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಗಮನ ಸೆಳೆಯಲು ಅವರು ಈ ರೀತಿ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
SCROLL FOR NEXT