ನವದೆಹಲಿ: ಮೂರು ದಿನಗಳ ಹಿಂದೆ ತಮ್ಮ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಸುಪ್ರೀಂ ಕೋರ್ಟ್ ನ ನಾಲ್ವರು ಹಿರಿಯ ನ್ಯಾಯಾಧೀಶರನ್ನು ಮಂಗಳವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ದೀಪಕ್ ಮಿಶ್ರಾ ಅವರು ಭೇಟಿ ಮಾಡಿ ಬಂಡಾಯ ಶಮನಕ್ಕೆ ಯತ್ನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದೀಪಕ್ ಮಿಶ್ರಾ ಅವರು ಇಂದು ಸುಪ್ರೀಂ ಕೋರ್ಟ್ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಜೆ. ಚಲಮೇಶ್ವರ್ ಮತ್ತು ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಮದನ್ ಬಿ.ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರನ್ನು ಭೇಟಿ ಮಾಡಿ ಸುಮಾರು 15 ನಿಮಿಷಗಳ ಕಾಲ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅಲ್ಲದೆ ನಾಳೆಯೂ ಈ ನಾಲ್ವರು ನ್ಯಾಯಾಧೀಶರೊಂದಿಗೆ ಸಿಜೆಐ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಯೂಟರ್ನ್ ಹೊಡೆದಿದ್ದು, ಸುಪ್ರೀಂ ಬಿಕ್ಕಿಟ್ಟಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಎರಡ್ಮೂರು ದಿನಗಳಲ್ಲಿ ಬಿಕ್ಕಟ್ಟು ಸಂಪೂರ್ಣ ಪರಿಹಾರವಾಗಲಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ನ್ಯಾಯಾಧೀಶರ ನಡುವಿನ ಬಿಕ್ಕಟ್ಟು ಇನ್ನೂ ಪರಿಹಾರವಾಗಿಲ್ಲ ಅನಿಸುತ್ತೆ. ಆದರೆ 2-3 ದಿನದಲ್ಲಿ ಬಿಕ್ಕಟ್ಟು ಸಂಪೂರ್ಣ ಪರಿಹಾರವಾಗುವ ವಿಶ್ವಾಸವಿದೆ ಎಂದಿದ್ದಾರೆ.
ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ನೊಳಗೆ ಹಲವು ಸಮಸ್ಯೆಗಳಿದ್ದು ಇದು ದೇಶದ ಅತ್ಯುನ್ನತ ನ್ಯಾಯ ಸಂಸ್ಥೆಯನ್ನು ಬಾಧಿಸುವುದರ ಜತೆಗೆ ದೇಶದ ಪ್ರಜಾತಂತ್ರವನ್ನೇ ಅಪಾಯಕ್ಕೆ ಒಡ್ಡಲಿದೆ ಎಂದು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics