ಪ್ರವೀಣ್ ತೊಗಾಡಿಯಾ, ಹಾರ್ದಿಕ್ ಪಟೇಲ್
ನವದೆಹಲಿ: ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಮುಖಂಡ ಪ್ರವೀಣ್ ತೊಗಾಡಿಯ ಅವರನ್ನು ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಮತ್ತು ಕಾಂಗ್ರೆಸ್ ನಾಯಕ ಅರ್ಜುನ್ ಮೊಧ್ವಾಡಿಯಾ ಭೇಟಿ ಮಾಡಿದ್ದಾರೆ.
ನಿನ್ನೆ ಸಂಜೆ ನಾಪತ್ತೆಯಾಗಿದ್ದ ಪ್ರವೀಣ್ ತೊಗಾಡಿಯಾ ಅವರು ಇಂದು ಅಹ್ಮದಾಬಾದ್ ನ ಚಂದ್ರಮಣಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ನಂತರ ಸುದ್ಧಿಗೋಷ್ಠಿ ನಡೆಸಿದ್ದ ಪ್ರವೀಣ್ ತೊಗಾಡಿಯಾ ರಾಜಸ್ಥಾನ ಪೊಲೀಸರ ವಿರುದ್ಧ ಕೆಂಡಕಾರಿದರು. ಅಲ್ಲದೆ ಅನಾವಶ್ಯಕವಾಗಿ ರಾಜಸ್ತಾನ ಪೊಲೀಸರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದು, ಬಂಧನದ ನೆಪದಲ್ಲಿ ನನ್ನನ್ನು ಎನ್ ಕೌಂಟರ್ ಮಾಡಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದರು.
ಪ್ರವೀಣ್ ತೊಗಾಡಿಯ ಅವರು ತಮಗೆ ಜೀವ ಬೆದರಿಕೆ ಇರುವುದಾಗಿ ಆರೋಪಿಸಿದ ನಂತರ ಹಾರ್ದಿಕ್ ಪಟೇಲ್ ಮತ್ತು ಅರ್ಜುನ್ ಮೊಧ್ವಾಡಿಯಾ ಭೇಟಿ ಮಾಡಿ ತಮ್ಮ ಬೆಂಬಲವನ್ನು ಸೂಚಿಸಿದರು. ನಂತರ ಮಾತನಾಡಿದ ಹಾರ್ದಿಕ್ ಪಟೇಲ್ ಬಿಜೆಪಿ ಸರ್ಕಾರ ಪ್ರವೀಣ್ ತೊಗಾಡಿಯಾ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.
ಸುದ್ಧಿಗೋಷ್ಠಿಯಲ್ಲಿ ಪ್ರವೀಣ್ ತೊಗಾಡಿಯಾ ಅವರು ಹಿಂದೂಗಳ ಏಕೀಕರಣಕ್ಕಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಿಂದೂಗಳ ಪರವಾಗಿ ಧ್ವನಿ ಎತ್ತಿದ್ದೇನೆ, ರಾಮ ಮಂದಿರ ವಿಚಾರ, ಗೋ ಸಂರಕ್ಷಣೆ ಕುರಿತ ನನ್ನ ಧ್ವನಿ ಅಡಗಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ಮಾಡುತ್ತಿವೆ. ಆದರೆ ನಾನು ಇದಕ್ಕೆಲ್ಲ ಹೆದರುವುದಿಲ್ಲ. ಹಿಂದೂಗಳಿಗಾಗಿ ನನ್ನ ಧ್ವನಿ ಎತ್ತುತ್ತೇನೆ. ಹಿಂದೂಗಳ ಪರವಾದ ನನ್ನ ಹೋರಾಟ ಮುಂದುವರೆಸುತ್ತೇನೆ. ಹಿಂದೂ ಪರ ಸಂಘಟನೆಗಳು ಒಗ್ಗೂಡಿದಾಗ ಮಾತ್ರ ಇಂತಹ ಕುತಂತ್ರಗಳನ್ನು ಹಣಿಯಲು ಸಾಧ್ಯ ಎಂದು ತೊಗಾಡಿಯಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos