ರೈಸಿನಾ ಸಂವಾದದಲ್ಲಿ ಸುಷ್ಮಾ ಸ್ವರಾಜ್
ನವದೆಹಲಿ: ಪ್ರಸ್ತುತ ವಿಶ್ವ ಸಮುದಾಯ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಭಯೋತ್ಪಾದನೆಯೇ ಮೂಲ ಕಾರಣ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ರೈಸಿನಾ ಸಂವಾದದಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಭಯೋತ್ಪಾದನೆ ಕುರಿತ ಭಾರತದ ನಿಲುವು ಹಲವು ದಶಕಗಳಿಂದಲೂ ಒಂದೇ ಆಗಿದೆ. ದಿನಗಳೆದಂತೆ ಭಯೋತ್ಪಾದನೆ ಎಂಬುದು ನಾಶಪಡಿಸಲಾಗದ ಸಮಸ್ಯೆಯಾಗಿ ಪರಿಣಮಿಸಿದ್ದು, ಭಯೋತ್ಪಾದನೆಯನ್ನು ಬುಡಸಹಿತ ಕಿತ್ತೊಗೆಯುವವರೆಗೂ ಅದು ನಾಶವಾಗುವುದಿಲ್ಲ. ಡಿಜಿಟಲ್ ಯುಗದಲ್ಲಿ ಭಯೋತ್ಪಾದನೆ ಕೂಡ ಆಧುನೀಕರಣಗೊಳ್ಳುತ್ತಿದ್ದು, ಮೊದಲು ಭಯೋತ್ಪಾದಕರಿಗೆ ನೆರವು ನೀಡುತ್ತಿರುವ ರಾಷ್ಟ್ರಗಳನ್ನು ಗುರುತಿಸಿ ಅವುಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿದರು.
ಹಿಂದೊಮ್ಮೆ ಭಯೋತ್ಪಾದನೆ ಎಂಬುದು ಕೇವಲ ಕೆಲ ದೇಶಗಳ ಸಮಸ್ಯೆಯಾಗಿ ಮಾತ್ರ ಇತ್ತು. ಆದರೆ ಇದೀಗ ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿ ಬದಲಾಗಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು. ಅಂತೆಯೇ ಮುಂಬೈ ದಾಳಿ ಪ್ರಕರಣ, ಉರಿ ಸೆಕ್ಟರ್ ಮೇಲಿನ ಉಗ್ರ ದಾಳಿ ಪ್ರಕರಣಗಳ ಕುರಿತು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಸುಷ್ಮಾ ಸ್ವರಾಜ್, ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳೂ ಕೂಡ ಈ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಭಯೋತ್ಪಾದನೆಯನ್ನೂ ಕೂಡ ತಮ್ಮ ಅನುಕೂಲಕ್ಕೆ ಬಳಕೆ ಮಾಡುತ್ತಿರುವ ರಾಷ್ಟ್ರಗಳನ್ನು ಮೊದಲು ಗುರುತಿಸಿ ನಿಯಂತ್ರಿಸಬೇಕಿದೆ ಎಂದು ಹೇಳಿದರು.