ಚೆನ್ನೈ: ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ 2016ರ ಡಿ. 5ಕ್ಕೆ ಬದಲಿಗೆ ಡಿ.4ರಂದು ಅಸುನೀಗಿದ್ದರು ಎಂದು ಜಯಲಲಿತಾ ಆಪ್ತರಾಗಿದ್ದ ಶಶಿಕಲಾ ಅವರ ಸೋದರ ಹೇಳಿದ್ದಾರೆ.
ತಿರುವರೂರು ಜಿಲ್ಲೆಯಲ್ಲಿ ಎಐಎಡಿಎಂಕೆ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಾಚಂದ್ರನ್ (ಎಂಜಿಆರ್) ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಶಿಕಲಾ ಸೋದರ ವಿ. ದಿವಾಕರನ್, ಜಯಲಲಿತಾ ಡಿಸೆಂಬರ್ 4, 2016ರ ಸಂಜೆ 5.15ಕ್ಕೆ ಅಸುನೀಗಿದ್ದರು, ಅಪೋಲೋ ಆಸ್ಪತ್ರೆಯವರು ಸುರಕ್ಷತೆ ದೃಷ್ಟಿಯಿಂದ ಜಯಲಲಿತಾ ಸಾವನ್ನು ಒಂದು ದಿನ ತಡವಾಗಿ ಘೋಷಿಸಿದ್ದರು ಎಂದಿದ್ದಾರೆ.
ಜಯಲಲಿತಾ ಅವರ ಸಾವಿನ ನಿಖರ ಕಾರಣ ಪತ್ತೆ ಹಚ್ಚಲು ಸರ್ಕಾರ ತನಿಖೆಗೆ ಮುಂಡಾಗಿರುವ ಬೆನ್ನಲ್ಲಿ ದಿವಾಕರನ್ ಈ ಹೇಳಿಕೆ ನೀಡಿದ್ದಾರೆ. ಇವರ ಈ ಹೇಳಿಕೆ ಇದೀಗ ವಿವಾದಕ್ಕೆ ಎಡೆ ಮಾಡಿದೆ.
ತಮಿಳು ನಾಡು ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ನಿರ್ಜಲೀಕರಣ ಸಮಸ್ಯೆಯಿಂದ ಸೆ.22 2016ಕ್ಕೆ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗೆ ದಾಖಲಾದ ನಂತರ ಅವರ ಆರೋಗ್ಯ ಸ್ಥಿತಿ ದಿನ ದಿನಕ್ಕೆ ಹದಗೆಡುತ್ತಾ ಸಾಗಿತ್ತು. ಅದೇ ವರ್ಷ ಡಿ.5ರಂದು ಜಯಲಲಿತಾ ಸಾವಿನ ಕುರಿತಂತೆ ವದಂತಿಗಳು ಹರಡಿದ್ದು ಆ ದಿನ ಸಂಜೆ ಅಪೋಲೋ ಆಸ್ಪತ್ರೆ ಮೂಲಗಳು ಅದನ್ನು ನಿರಾಕರಿಸಿದ್ದವು. ಆದರೆ ಅದೇ ದಿನ ರಾತ್ರಿ ಸುಮಾರು 11.30ಕ್ಕೆ ಜಯಲಲಿತಾ ಮರಣವನ್ನು ಅಪೋಲೋ ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ಘೋಷಿಸಿದ್ದರು.