ದೇಶ

ಶಾಸಕರ ಅನರ್ಹತೆ: ಚುನಾವಣಾ ಆಯೋಗದ ವಿರುದ್ಧ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಆಪ್, ಹೊಸ ಅರ್ಜಿ ಸಲ್ಲಿಕೆ

Lingaraj Badiger
ನವದೆಹಲಿ: ಲಾಭದಾಯ ಹುದ್ದೆ ಹೊಂದಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಮಾಡಿದ್ದ ಶಿಫಾರಸನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಆಪ್ ಶಾಸಕರು ಹಿಂಪಡೆದಿದ್ದು, ಈಗ ಹೊಸದಾಗಿ ಅರ್ಜಿ ಸಲ್ಲಿಸುವುದಾಗಿ ಸೋಮವಾರ ಹೇಳಿದ್ದಾರೆ. 
ಆಪ್ ಶಾಸಕರು ತಮ್ಮ ಅರ್ಜಿ ಹಿಂಪಡೆಯಲು ನ್ಯಾಯಮೂರ್ತಿ ರೇಖಾ ಪಳ್ಳಿ ಅವರು ಒಪ್ಪಿಗೆ ಸೂಚಿಸಿದ್ದಾರೆ. 
20 ಆಪ್ ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಮಾಡಿದ್ದ ಶಿಫಾರಸಿಗೆ ಹೀಗಾಗಲೇ ರಾಷ್ಟ್ರಪತಿ ರಾಮನಾಥ್ ಕೊವಿಂಗ್ ಅವರು ಸಹಿ ಹಾಕಿದ್ದು, ಈ ಸಂಬಂಧ ಆಯೋಗ ಜನವರಿ 20ರಂದು ಅಧಿಸೂಚನೆಯನ್ನು ಹೊರಡಿಸಿದೆ. ಹೀಗಾಗಿ ಚುನಾವಣಾ ಆಯೋಗದ ಶಿಫಾರಸು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಈಗ 'ಅಪ್ರಸ್ತುತ'ವಾಗಿದೆ. ಅಧಿಸೂಚನೆಯನ್ನು ಪರಿಶೀಲಿಸಿದ ನಂತರ ಹೊಸದಾಗಿ ಅರ್ಜಿ ಸಲ್ಲಿಸುವುದಾಗಿ ಆಪ್ ಶಾಸಕರ ಪರ ವಕೀಲ ಮನಿಶ್ ವಶಿಷ್ಠ ಅವರು ತಿಳಿಸಿದ್ದಾರೆ.
ಜನವರಿ 19ರಂದು ಆಪ್ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಈ ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತು. ಆದರೆ  20 ಶಾಸಕರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿರುವ ಬಗ್ಗೆ ವರದಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಚುನಾವಣಾ ಆಯೋಗ ಆಮ್ ಆದ್ಮಿ ಪಕ್ಷದ 20 ಶಾಸಕರು ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ಲಾಭದಾಯಕ ಹುದ್ದೆ ಹೊಂದಿದ್ದು, ಅವರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ ಕೆಲವೇ ಕ್ಷಣಗಳಲ್ಲಿ ಅನರ್ಹಗೊಂಡ ಆಪ್ ಶಾಸಕರು ಆಯೋಗ ಶಿಫಾರಸು ಪ್ರಶ್ನಿಸಿ ಹಂಗಾಮಿ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಅವರಿಗೆ ಅರ್ಜಿ ಸಲ್ಲಿಸಿ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ಬಳಿಕ ಅರ್ಜಿಯನ್ನು ನ್ಯಾಯಮೂರ್ತಿ ರೇಖಾ ಪಳ್ಳಿ ಅವರಿಗೆ ವರ್ಗಾಯಿಸಲಾಗಿತ್ತು.
SCROLL FOR NEXT