ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಪ್ರಸ್ತುತ ದೇಶದಲ್ಲಿ ಸೃಷ್ಟಿಗೊಂಡಿರುವ ನ್ಯಾಯಾಂಗ ಬಿಕ್ಕಟ್ಟು ವಿಚಾರದಿಂದ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ದೂರವಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ಟೈಮ್ಸ್ ನೌ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎದುರಾಗಿರುವ ಬಿಕ್ಕಟ್ಟನ್ನು ನ್ಯಾಯಾಂಗವೇ ಕುಳಿತು ಸಮಸ್ಯೆಯನ್ನು ಪರಿಹರಿಸಿಕೊಳ್ಳಲಿದೆ. ಹೀಗಾಗಿ ನ್ಯಾಯಾಂಗ ಬಿಕ್ಕಟ್ಟು ವಿಚಾರದಲ್ಲಿ ಸರ್ಕಾರವಾಗಲೀ, ರಾಜಕೀಯ ಪಕ್ಷಗಳು ದೂರವಿರಬೇಕೆಂದು ಹೇಳಿದ್ದಾರೆ.
ನಮ್ಮ ನ್ಯಾಯಾಂಗ ಹಿಂದಿನಿಂದಲೂ ಸಾಕಷ್ಟು ಶಕ್ತಿಶಾಲಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಸಾಮರ್ಥ್ಯವುಳ್ಳ ಜನರಿದ್ದಾರೆ. ಯಾವುದೇ ಸಮಸ್ಯೆ ಎದುರಾದರೂ ಒಗ್ಗಟ್ಟಿನಿಂದ ಕುಳಿತು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ನಾಯ್ಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆಯಿಂದೆ. ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರವನ್ನು ಕಂಡುಕೊಳ್ಳುತ್ತಾರೆಂದು ತಿಳಿಸಿದ್ದಾರೆ.
ಇದೇ ವೇಳೆ ಸಿಜೆಐ ವಿರುದ್ಧ ಸಿಡಿದೆದ್ದು ಸುದ್ದಿಗೋಷ್ಟಿ ನಡೆಸಿದ್ದ ನ್ಯಾಯಾಧೀಶರ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಈ ವಿಚಾರದಿಂದ ನಾನು ದೂರವಿರಲು ಇಚ್ಛಿಸುತ್ತೇನೆ. ಅಲ್ಲದೆ, ಸರ್ಕಾರ ಹಾಗೂ ರಾಜಕೀಯ ಪಕ್ಷಗಳೂ ಕೂಡ ಈ ವಿಚಾರದಿಂದ ದೂರವಿರಬೇಕು ಎಂದಿದ್ದಾರೆ.
ಗುಜರಾತ್ ರಾಜ್ಯ ಮುಖ್ಯಮಂತ್ರಿಯಾಗಿದ್ದಾಗ ವಿರೋಧ ಪಕ್ಷಗಳ ವರ್ತನೆ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಜಕೀಯವಾಗಿ ನನ್ನನ್ನು ಅಂತ್ಯಗೊಳಿಸಲು ಸಾಕಷ್ಟು ಯತ್ನಗಳು ನಡೆದಿದ್ದವು. ಅವರು ಹಿಡಿದ ಹಾದಿಯೇ ಇಂದು ನಾನು ಈ ಮಟ್ಟಕ್ಕೆ ತಲುಪಲು ಸಹಾಯವಾಯಿತು ಎಂದು ಹೇಳಿದ್ದಾರೆ.