ಲಖನೌ: ಭಾರತದ ಮೇಲೆ ಪದೇ ಪದೇ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ತಾನದ ಬಣ್ಣ ಬಯಲಾಗುತ್ತಲೇ ಇದೆ. ಆದರೆ ಇದರ ನಡುವೆಯೇ ಪಾಕಿಸ್ತಾನ ಹಾಗೂ ಭಾರತದ ನಾಗರಿಕರ ನಡುವೆ ಸುಮಧುರ ಬಾಂಧವ್ಯ ಮನೆ ಮಾಡಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.
ಉತ್ತರ ಪ್ರದೇಶದ ಲಖನೌ ಮೂಲದ ಯುವಕನೊಬ್ಬ ಪಾಕಿಸ್ತಾನದ ಯುವತಿಯನ್ನು ವರಿಸಿದ್ದಾನೆ. ಲಖನೌ ದಲ್ಲಿ ಇಂಜಿನಿಯರ್ ಆಗಿರುವ ನಖಿ ಅಲಿ ಖಾನ್ ಪಾಕಿಸ್ತಾನದ ಕರಾಚಿ ಮೂಲದ ಸಬಾಹತ್ ಫಾತಿಮಾಳನ್ನು ಮದುವೆಯಾಗಿದ್ದು ಇದಕ್ಕೆ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಕಾರ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಈ ಜೋಡಿ ನಿಶ್ಚಿತಾರ್ಥ ನಡೆದಿದ್ದು ಗಡಿಯಲ್ಲಿನ ಸಮಸ್ಯೆಯಿಂದಾಗಿ ಮದುವೆ ಕಾರ್ಯಕ್ರಮ ಮುಂದೂಡುತ್ತಲೇ ಬರಲಾಗುತ್ತಿತ್ತು. ಆದರೆ ಇತ್ತೀಚೆಗೆ ಇಂತಹುದೇ ಪ್ರಕರಣ ಸಂಬಂಧ ಸಚಿವೆ ಸುಷ್ಮಾ ನೆರವಾಗಿದ್ದ ವರದಿಯೊಂದು ಆಂಗ್ಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಅದನ್ನು ಕಂಡ ನಖಿ ಅಲಿ ಖಾನ್ ತಾನೂ ಸಾಮಾಜಿಕ ತಾಣದ ಮುಖೇನ ಸುಷ್ಮಾ ಸ್ವರಾಜ್ ಅವರ ಸಂಪರ್ಕ ಸಾಧಿಸಿದ್ದರು. ಆ ವೇಳೆ ಅವರ ಮನವಿ ಆಲಿಸಿದ್ದ ಸಚಿವೆ ಸಬಾಹತ್‌ಗೆ ಭಾರತಕ್ಕೆ ಬರಲು ವೀಸಾ ನೀಡಿದ್ದಾರೆ.
ಸುಷ್ಮಾ ಸ್ವರಾಜ್ ಅವರ ನೆರವು ಪಡೆದ ಕರಾಚಿ ವಧುವಿನ ಕುಟುಂಬ ಭಾರತಕ್ಕೆ ಆಗಮಿಸಿದ್ದು ಕಳೆದ ಶುಕ್ರವಾರ ಈ ನವಜೋಡಿ ವಿವಾಹವು ಸಂಭ್ರದಿಂದ ನಡೆಯಿತು.
"ನಮ್ಮದು ಅವಿಭಕ್ತ ಕುಟುಂಬ, ದೇಶ ವಿಭಜನೆ ಬಳಿಕ ಬೇರಾಗಿದ್ದೆವು. ಇದೀಗ ಸಚಿವೆಯ ನೆರವಿನಿಂದ ನಾವೆಲ್ಲ ಒಟ್ಟು ಸೇರಿದ್ದೇವೆ. ಸುಷ್ಮಾ ಅವರ ಸಹಾಯ ನಾವು ಎಂದಿಗೂ ಮರೆಯುವುದಿಲ್ಲ" ಎಂದು ಸಬಾಹತ್ ಕುಟುಂಬಸ್ಥರು ಹೇಳಿದರು.