ಗುರುಗ್ರಾಮ ಶಾಲಾ ಬಸ್ ಮೇಲೆ ದಾಳಿ
ಗುರುಗ್ರಾಮ: ಪದ್ಮಾವತ್ ಚಿತ್ರ ಬಿಡುಗಡೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಕರ್ಣಿ ಸೇನಾ ಕಾರ್ಯಕರ್ತರ ಪ್ರತಿಭಟನೆ ಮಿತಿ ಮೀರಿ ಹಿಂಸಾರೂಪಕ್ಕೆ ತಿರುಗಿದ್ದು, ಗುರುಗ್ರಾಮದಲ್ಲಿ ಸುಮಾರು 24 ಶಾಲಾ ವಿದ್ಯಾರ್ಥಿಗಳಿದ್ದ ಬಸ್ ಗೆ ಬೆಂಕಿ ಹಾಕಲಾಗಿದೆ.
ಬುಧವಾರ ಸಂಜೆ ಕರ್ಣಿ ಸೇನಾ ಕಾರ್ಯಕರ್ತರು ಗುರುಗ್ರಾಮದಲ್ಲಿ ಮನೆಗೆ ಹಿಂತಿರುಗುತ್ತಿದ್ದ ಶಾಲಾ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಸುಮಾರು 24 ಮಕ್ಕಳು ಬಸ್ ನಲ್ಲಿದ್ದರು. ಕಲ್ಲು ತೂರಾಟ ವೇಳೆ ಭಯದಿಂದ ಅಳುತ್ತಾ ಕೂಗಿಕೊಂಡು, ಕಲ್ಲೇಟಿನಿಂದ ತಪ್ಪಿಸಿಕೊಳ್ಳಲು ಕುರ್ಚಿಗಳ ಕೆಳಗೆ ತೂರಿ ಜೀವ ಉಳಿಸಿಕೊಂಡಿದ್ದಾರೆ. ಘಟನೆ ವೇಳೆ ಬಸ್ ನಲ್ಲಿ ಚಾಲಕ, ಸಹಾಯಕ, ಇಬ್ಬರು ಶಿಕ್ಷಕರು ಹಾಗೂ 24 ಪುಟ್ಟ ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.
ದಾಳಿಯಿಂದಾಗಿ ಬಸ್ಸಿನ ಗಾಜುಗಳು ಒಡೆದಿದ್ದು ಕಾರ್ಯಕರ್ತರ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಗುರುಗ್ರಾಮ-ಅಲ್ವಾರ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರ ಮುಂದೆಯೇ ಪಟ್ರೋಲ್ ಬಾಂಬ್ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು, ಬಸ್ಸಿಗೆ ಸಂಪೂರ್ಣವಾಗಿ ಬೆಂಕಿಗೆ ಹಚ್ಚುವ ಯೋಜನೆ ರೂಪಿಸಿದಂತೆ ಕಾಣಿಸುತ್ತಿತ್ತು. ಆದರೆ ಪೊಲೀಸರು ಕೂಡಲೇ ಈ ಗುಂಪನ್ನು ತಡೆದು ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
'ಭಯೋತ್ಪಾದನೆ' ಎಂದ ಬಾಲಿವುಡ್
ಇನ್ನು ಈ ಘಟನೆ ಸಂಬಂಧ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಾಲಿವುಡ್ ಮಂದಿ ಇದನ್ನು ಭಯೋತ್ಪಾದನೆ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್, ಸುಧೀರ್ ಮಿಶ್ರಾ ಮತ್ತು ವಿಶಾಲ್ ದದ್ಲಾನಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳಿದ್ದ ಬಸ್ ಮೇಲೆ ದಾಳಿ ಪ್ರತಿಭಟನೆಯಲ್ಲ... ಅದು ಭಯೋತ್ಪಾದನೆ. ಈ ಕೃತ್ಯದಲ್ಲಿ ಪಾಲ್ಗೊಂಡವರೆಲ್ಲರೂ ಭಯೋತ್ಪಾದಕರು ಎಂದು ಕಿಡಿಕಾರಿದ್ದಾರೆ. ಅಂತೆಯೇ ಖ್ಯಾತನಟ ಪ್ರಕಾಶ್ ರಾಜ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಲ್ಲೊಂದು ಚುನಾಯಿತ ಸರ್ಕಾರವಿದ್ದು, ಪ್ರತಿಪಕ್ಷ ಕೂಡ ಇದೆ. ಹೀಗಿದ್ದೂ ಮಕ್ಕಳ ಮೇಲೆ ದಾಳಿಯಾಗಿದೆ. ನಮ್ಮ ದೇಶದ ಮಕ್ಕಳು ಪ್ರಾಣಭೀತಿಯಲ್ಲಿದ್ದಾರೆ. ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕೆ ದೇಶದ ಮಕ್ಕಳ ಭದ್ರತೆಯಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಅಂತೆಯೇ ವಿಶಾಲ್ ದದ್ಲಾನಿ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಕಳೆದ ನಾಲ್ಕು ತಿಂಗಳಿನಿಂದ ಈ ಬಗ್ಗೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರವಾಗಲಿ ಅಥವಾ ಗುರುಗ್ರಾಮ ಸರ್ಕಾರವಾಗಲೀ ಸಮಸ್ಯೆ ಇತ್ಯರ್ಥಕ್ಕೆ ಕ್ರಮವನ್ನೇಕೆ ಕೈಗೊಂಡಿಲ್ಲ. ಅಂದೇ ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದ್ದರೆ ಇಂದು ಮಕ್ಕಳ ಮೇಲೆ ದಾಳಿಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಮತ್ತೋರ್ವ ನಟ ಅನುಭಲ್ ಸಿನ್ಹಾ ಅವರು ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಆಡಳಿತಾ ರೂಢ ಬಿಜೆಪಿ ವಿರುದ್ಧ ಅಲ್ಲ..ನಾವು ಪ್ರತಿಪಕ್ಷ ಕಾಂಗ್ರೆಸ್ ನಡೆ ಕುರಿತಂತೆ ತೀವ್ರ ಆಚ್ಚರಿಗೊಂಡಿದ್ದೇವೆ. ಪ್ರಸ್ತುತ ದೇಶದಲ್ಲಿ ಉಂಟಾಗಿರುವ ಪರಿಸ್ಥಿತಿ ನೀವು ಕೂಡ ಕಾರಣ. ಪ್ರತಿಪಕ್ಷಗಳು ಬಲಿಷ್ಠವಾಗಿದ್ದಿದ್ದರೆ ದೇಶದಲ್ಲಿ ಇಂತಹ ಸಮಸ್ಯೆಗಳು ತಲೆದೋರುತ್ತಿರಲಿಲ್ಲ. ನಾಚಿಕೆಯಾಗಬೇಕು ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ, ನಿರ್ಮಾಪಕ ರಾಜ್ ಕುಂದ್ರಾ ಅವರು ಈ ಬಗ್ಗೆ ಮಾತನಾಡಿದ್ದು, ಭಾರತವನ್ನು ನಾವು ಅಭಿವೃದ್ಧಿ ಶೀಲ ರಾಷ್ಟ್ರವೆಂದು ಕರೆಯುತ್ತೇವೆ. ಆದರೆ ಇಂತಹ ಘಟನೆಗಳು ಇದಕ್ಕೆ ಅಪವಾದವಾಗಿದ್ದು, ಪುಟ್ಟ ಮಕ್ಕಳು ಎಂಬುದನ್ನೂ ಕೂಡ ನೋಡದೆ ಅವರ ಮೇಲೆ ದಾಳಿ ಮಾಡಿರುವುದು ಖಂಡನೀಯ, ಮಕ್ಕಳ ಮೇಲೆ ದಾಳಿ ಮಾಡಿರುವ ಪ್ರತೀಯೊಬ್ಬ ದುಷ್ಕರ್ಮಿಯನ್ನೂ ಗಲ್ಲಿಗೆ ಹಾಕಬೇಕು. ಈ ಕೃತ್ಯದ ಮೂಲಕ ನಿಮ್ಮ ಮೇಲೆ ನಮಗಿದ್ದ ಗೌರವವನ್ನು ಕಳೆದುಕೊಂಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳ ಬಸ್ ಮೇಲಿನ ದಾಳಿಯಲ್ಲಿ ತನ್ನ ಪಾತ್ರವಿಲ್ಲ: ಕರ್ಣಿಸೇನಾ ಸ್ಪಷ್ಟನೆ
ಏತನ್ಮಧ್ಯೆ ನಿನ್ನೆ ಗುರುಗ್ರಾಮದಲ್ಲಿ ನಡೆದ ಶಾಲಾ ಮಕ್ಕಳ ಬಸ್ ಮೇಲಿನ ದಾಳಿ ಪ್ರಕರಣ ಸಂಬಂಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವಂತೆಯೇ ಇತ್ತ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ಣಿ ಸೇನಾ ಬಸ್ ಮೇಲಿನ ದಾಳಿಯಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದೆ.