ದೆಹಲಿ: ತೀವ್ರ ವಿರೋಧದ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಅಭಿಯನದ ಪದ್ಮಾವತ್ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಚಿತ್ರ ಬಿಡುಗಡೆ ವಿರೋಧಿಸಿ ಕರ್ನಿ ಸೇನಾ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಚಿತ್ರದಲ್ಲಿನ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿ ಚಿತ್ರದ ಟೈಟಲ್ ಬದಲಾವಣೆ ಮಾಡಿ ಬಿಡುಗಡೆ ಮಾಡಲಾಗಿದೆ.
ಆದಾಗ್ಯೂ, ಈ ಸಮುದಾಯ ಪ್ರಾಬಲ್ಯ ಹೊಂದಿರುವ ರಾಜ್ಯಗಳಾದ ರಾಜಸ್ತಾನ, ಮಧ್ಯಪ್ರದೇಶ, ಗುಜರಾತ್ ಹಾಗೂ ಗೋವಾ ರಾಜ್ಯಗಳಲ್ಲಿ ಚಿತ್ರ ಪ್ರದರ್ಶಿಸದಿರಲು ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ.
ಪದ್ಮಾವತ್ ಚಿತ್ರ ಬಿಡುಗಡೆಗೆ ಆಗ್ರಹಿಸಿ ಹರಿಯಾಣದ ಗುರುಗ್ರಾಮದಲ್ಲಿ ನಿನ್ನೆ ನಡೆದ ಪ್ರತಿಭಟನೆ ವೇಳೆ ದುಷ್ಕರ್ಮಿಗಳು ಶಾಲಾ ಬಸ್ ವೊಂದಕ್ಕೆ ಬೆಂಕಿ ಹಚ್ಚಿದ್ದರಿಂದ ಇಂದು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಗುರುಗ್ರಾಮ, ನೋಯ್ಡಾದಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಉದ್ರಿಕ್ತ ಪ್ರತಿಭಟನಾಕಾರರು ಜಿ.ಡಿ. ಗೋಯಂಕಾ ವರ್ಲ್ಡ್ ಶಾಲೆಯ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದರು. ಶಿಕ್ಷಕರು ಭಯಭೀತಗೊಂಡಿದ್ದ ವಿದ್ಯಾರ್ಥಿಗಳನ್ನು ಬಸ್ಸಿನ ಸೀಟಿನ ಕೆಳಗೆ ಕುಳಿರಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದರು.
ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದಾರೆ.