ಆರ್'ಎಸ್ಎಸ್ ನಾಯಕ ಸುರೇಶ್ ಭಯ್ಯಾಜಿ ಜೋಶಿ
ಕೋಲ್ಕತಾ: ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣ ಮಾಡುವುದು ಹೆಮ್ಮೆಯ ವಿಚಾರ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ಶುಕ್ರವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಆರ್'ಎಸ್ಎಸ್ ನಾಯಕ ಸುರೇಶ್ ಭಯ್ಯಾಜಿ ಜೋಶಿ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಇಸ್ಲಾಂ ವಿರುದ್ಧದ ಹೋರಾಟವಲ್ಲ. ಇದು ಹೆಮ್ಮೆ, ಗೌರವ ಹಾಗೂ ದೌರ್ಜನ್ಯ, ಗುಲಾಮಗಿರಿಯನ್ನು ತೊಡೆದುಹಾಕುವ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.
ನಮ್ಮ ದೇಶದಲ್ಲಿ ರಾಮ ಮಂದಿಗಳ ಕೊರತೆಯಿದೆಯೇ? ದೇಶದಲ್ಲಿ ರಾಮ ಮಂದಿಗಳ ಕೊರತೆಯಿಲ್ಲ. ಅಯೋಧ್ಯೆ ರಾಮ ಮಂದಿರ ವಿಚಾರ ಕೇವಲ ನಿರ್ಮಾಣ, ಭೂಮಿಯ ಬೆಲೆಯಗಷ್ಟೇ ಸಂಬಂಧಿಸಿದ್ದಲ್ಲ. ಇದು ನಮ್ಮ ಹೆಮ್ಮೆ, ಆತ್ಮಗೌರವ, ಗುಲಾಮಗಿರಿ, ದೌರ್ಜನ್ಯಗಳ ವಿರುದ್ಧದ ಪ್ರತೀಕದ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.
ರಾಮ ಮಂದಿನ ನಿರ್ಮಾಣ ಇಸ್ಲಾಂ ವಿರುದ್ಧದ ಹೋರಾಟವಲ್ಲ. ಇದು ರಾಷ್ಟ್ರೀಯತೆಯ ವಿಚಾರವಾಗಿದೆ. ಲಕ್ಷಾಂತರ ಕರ ಸೇವಕರು ಅಯೋಧ್ಯೆಗೆ ತೆರಳುತ್ತಿದ್ದರು. ಇಸ್ಲಾಂ ಧಾರ್ಮಿಕ ಸ್ಥಳಗಳ ಮೇಲೆ ಒಂದು ಕಲ್ಲನ್ನು ಕೂಡ ಎಸೆಯಲಿಲ್ಲ. ಇದು ನಮ್ಮ ಭಾರತ. ಇದು ಹಿಂದು ಸಮಾಜ. ದೊಡ್ಡ ರಾಷ್ಟ್ರಗಳಿಂದ ದಬ್ಬಾಳಿಕೆಯನ್ನು ಎದುರಿಸುತ್ತಿರುವ ಸಣ್ಣ ರಾಷ್ಟ್ರಗಳು ಇಂದು ತಮಗೆ ದಾರಿ ತೋರಿಸುವಂತೆ ಭಾರತದತ್ತ ನೋಡುತ್ತಿದ್ದಾರೆ.
ದಬ್ಬಾಳಿಕೆ ನಡೆಯುತ್ತಿರುವ ದೊಡ್ಡ ರಾಷ್ಟ್ರಗಳ ವಿರುದ್ಧ ಹೋರಾಡಲು ಭಾರತದತ್ತ ನೋಡುತ್ತಿರುವ ಸಣ್ಣ ರಾಷ್ಟ್ರಗಳು ಹೆಮ್ಮೆ, ಆತ್ಮಗೌರವ ಹಾಗೂ ತಮ್ಮ ಸಾರ್ವಭೌಮತ್ವದ ರಕ್ಷಣೆಯೊಂದಿಗೆ ಮುನ್ನಡೆಯುವಂತೆ ನಾವು ತಿಳಿಸಬೇಕಿದೆ. ಭಾರತ ಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದನ್ನು ನೋಡಿದರೆ ಬಹಳ ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ.