ಶ್ರೀನಗರ: 69ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿರುವ ಭಾರತದ ಸಂಭ್ರಮಕ್ಕೆ ಉಗ್ರರು ಮತ್ತು ಇತರೆ ದುಷ್ಕರ್ಮಿಗಳು ಅಡ್ಡಿ ಪಡಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಕಾಶ್ಮೀರದ ಉಗ್ರ ಪೀಡಿತ ಜಿಲ್ಲೆಗಳಾದ ಪುಲ್ವಾಮ, ಅನಂತ್ ನಾಗ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಸೂಕ್ಷ್ಮ ಮತ್ತು ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ನಿನ್ನೆಯಿಂದಲೇ ಮೊಬೈಲ್ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಗಣರಾಜ್ಯೋತ್ಸವ ಮತ್ತು ಸ್ವತಂತ್ರ್ಯ ದಿನಾಚರಣೆ ಸಂಭ್ರಮದ ವೇಳೆ ಇಂಟರ್ ನೆಟ್ ಸೇವೆ ಸ್ಥಗಿತ ಸಾಮಾನ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಕಾಶ್ಮೀರದಲ್ಲಿ ಗಣರಾಜ್ಯೋತ್ಸ ಕಾರ್ಯಕ್ರಮ ನಡೆಯಲಿರುವ ಶ್ರೀನಗರದ ಶೇರ್ ಇ ಕಾಶ್ಮೀರ ಕ್ರಿಕೆಟ್ ಮೈದಾನಕ್ಕೆ ವ್ಯಾಪಕ ಭದ್ರತೆ ಒದಗಿಸಲಾಗಿದೆ. ಮುಖ್ಯಮಂತ್ರಿ ಮುಫ್ತಿ ಮೆಹಬೂಬಾ ಅವರು ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗಡಿಯಲ್ಲಿ ಹೆಚ್ಚುವರಿ ಪಡೆಗಳ ನಿಯೋಜನೆ
ಇನ್ನು ಇತ್ತೀಚೆಗಷ್ಟೇ ಪ್ರಕ್ಷುಬ್ಧವಾಗಿದ್ದ ಇಂಡೋ-ಪಾಕ್ ಕೊಂಚ ಶಾಂತವಾಗಿದ್ದು, ಗಣರಾಜ್ಯೋತ್ಸವ ನಿಮಿತ್ತ ಮತ್ತೆ ಪಾಕ್ ಸೈನಿಕರು ಭಾರತವನ್ನು ಕೆಣಕುವ ಸಾಧ್ಯತೆ ಇರುವುದರಿಂದ ಗಡಿಯಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಶಾರ್ಪ್ ಶೂಟರ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.