ನವದೆಹಲಿ: ಅಸಿಯಾನ್ ಒಕ್ಕೂಟದ ವಿಶ್ವ ನಾಯಕರು ಪಾಲ್ಗೊಂಡಿರುವ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ರಾಜಧಾನಿ ದೆಹಲಿಯಲ್ಲಿ ಅಭೂತಪೂರ್ವ ಭದ್ರತೆ ಕೈಗೊಳ್ಳಲಾಗಿದ್ದು, ಭದ್ರತೆಗಾಗಿ ಬರೊಬ್ಬರಿ 60 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಪ್ರಮುಖವಾಗಿ ಪಥಸಂಚಲನ ನಡೆಯುವ ರಾಜ್ ಪಥ್ ನ ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಈಗಾಗಲೇ ರಾಜಪಥದಲ್ಲಿ ವಿಮಾನ ಹಾರಾಟ ನಿಷೇಧಿಸಲಾಗಿದೆ. ಅಂತೆಯೇ ಮೊಬೈಲ್ ಪ್ರಹಾರ ದಳಗಳು, ನಿಮಾನ ನಿಗ್ರಹ ಗನ್ ಗಳು, ತುರ್ತು ಪ್ರಹಾರ ದಳಗಳು, ಆ್ಯಂಟಿ ಮಿಸೈಲ್ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಅಂತೆಯೇ ದೆಹಲಿ ರಾಜಪಥ್ ಸುತ್ತಮುತ್ತಲ ಪ್ರದೇಶದಲ್ಲಿ ನೂರಾರು ಶಾರ್ಪ್ ಶೂಟರ್ ಗಳನ್ನು ನಿಯೋಜಿಸಲಾಗಿದ್ದು, ಪಥ ಸಂಚಲನ ನಡೆಯುವ ಒಟ್ಟು ರಾಜಪಥ ದಿಂದ ಕೆಂಪುಕೋಟೆಯವರೆಗಿನ 8 ಕಿ.ಮೀ ವ್ಯಾಪ್ತಿಯಲ್ಲಿ ಈ ಶಾರ್ಪ್ ಶೂಟರ್ ಗಳು ತೀವ್ರ ಎಚ್ಚರಿಕೆ ವಹಿಸಲಿದ್ದಾರೆ.
ಭದ್ರತೆಗಾಗಿ ಭಾರತೀಯ ಸೇನೆಯ ಸಿಆರ್ ಪಿಎಫ್, ಐಟಿಬಿಪಿ, ಬಿಎಸ್ ಎಫ್ ಸೇರಿದಂತೆ ವಿವಿಧ ಪಡೆಗಳ ಮತ್ತು ದೆಹಲಿ ಪೊಲೀಸ್ ಪಡೆಯ ಸಿಬ್ಬಂದಿ ಸೇರಿದಂತೆ ಸುಮಾರು 60 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ರಾಜಪಥ ಸುತ್ತಮುತ್ತಲ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಿಸಿಟಿವಿ ವೀಕ್ಷಣೆಗಾಗಿ ಪ್ರತ್ಯೇಕ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.
ಇಂದು ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾರತೀಯ ಸೇನೆಯ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಲಿದ್ದು, ಈ ವಿದ್ಯುಕ್ತ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವರುಗಳು ಅಸಿಯಾನ್ ಒಕ್ಕೂಟದ 10 ವಿಶ್ವ ನಾಯಕರು ಸಾಕ್ಷಿಯಾಗಲಿದ್ದಾರೆ.