ದೇಶ

ಕಲ್ಲಿದ್ದಲು ಕಳ್ಳತನ ಪ್ರಕರಣ: ಜೆಎಂಎಂ ಶಾಸಕ ಸೇರಿ ಐವರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ

Lingaraj Badiger
ರಾಮಗಢ: ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಎಂ ಶಾಸಕ ಯೋಗೇಂದ್ರ ಪ್ರಸಾದ್ ಮಹ್ತೊ ಸೇರಿದಂತೆ ಐವರಿಗೆ ಜಾರ್ಖಂಡ್ ಕೋರ್ಟ್ ಗುರುವಾರ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2010ರಲ್ಲಿ ನಡೆದ ಕಲ್ಲಿದ್ದಲು ಕಳ್ಳತನ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ರಾಮಗಢ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶೆ ಆರ್ ಪಿ ಮಾಲಾ ಅವರು, ಜಾರ್ಖಂಡ್ ಮುಕ್ತಿ ಮೊರ್ಚಾ(ಜೆಎಂಎಂ) ಶಾಸಕ ಸೇರಿದಂತೆ ಐವರಿಗೆ ಕಠಿಣ ಜೈಲು ಶಿಕ್ಷೆ ಮತ್ತು ತಲಾ 5 ಸಾವಿರ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದರೆ ಮತ್ತೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ಶಾಸಕನ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಾಲಾ ಅವರು ಒಂದು ತಿಂಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದ್ದಾರೆ.
ಕಲ್ಲಿದ್ದಲು ಕಳ್ಳತನಕ್ಕೆ ಸಂಬಂಧಿಸಿದಂತೆ 2010ರಲ್ಲಿ ಯೋಗೇಂದ್ರ ಪ್ರಸಾದ್ ಮಹ್ತೊ ಸೇರಿದಂತೆ ಐವರ ವಿರುದ್ಧ ಬೋಕರೊ ಜಿಲ್ಲೆಯ ರಾಜರಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
SCROLL FOR NEXT