ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ; ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ 1,500 ಭಾರತೀಯ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಯಾತ್ರಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಹೇಳಿದ್ದಾರೆ.
ಭಾರತೀಯರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಚಿವೆ ಸುಷ್ಮಾ ಸ್ವರಾಜ್ ಅವರು, ಸಿಮಿಕೋಟ್ ನಲ್ಲಿ 525 ಯಾತ್ರಾರ್ಥಿಗಳು, ಹಿಲ್ಸಾದಲ್ಲಿ 550 ಮತ್ತು ಟಿಬೆಟ್ ನಲ್ಲಿ 500 ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಸಂಕಷ್ಟದಲ್ಲಿರುವ ಭಾರತೀಯ ಪ್ರಜೆಗಳನ್ನು ರಕ್ಷಣೆ ಮಾಡಲು ನೇಪಾಳ ಸೇನಾ ಹೆಲಿಕಾಪ್ಟರ್ ಗಳ ನೆರವು ಕೇಳಲಾಗಿದೆ ಎಂದು ಹೇಳಿದ್ದಾರೆ.
ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರತಿನಿಧಿಗಳು ಸಿಮಿಕೊಟ್ ಮತ್ತು ನೇಪಾಳ್ಗಂಜ್'ಗೆ ತೆರಳಿದ್ದು, ಯಾತ್ರಾರ್ಥಿಗಳೊಂದಿಗೆ ಇದ್ದಾರೆ. ಯಾತ್ರಾರ್ಥಿಗಳಿಗೆ ಆಹಾರ ಹಾಗೂ ಇತರೆ ಸೌಲಭ್ಯಗಳನ್ನು ನೀಡುತ್ತಿದ್ದಾರೆ.
ಸಿಮಿಕೋಟ್ ನಲ್ಲಿರುವ ಹಿರಿಯ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಯಾತ್ರಾರ್ಥಿಗಳಿಗೆ ವೈದ್ಯಕೀಯ ಸಹಾಯಗಳನ್ನು ಮಾಡಲಾಗುತ್ತಿದೆ. ಹಿಲ್ಸಾದಲ್ಲಿ ಯಾತ್ರಾರ್ಥಿಗಳಿಗೆ ನೆರವು ನೀಡುವಂತೆ ಸ್ಥಳೀಯ ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯಾತ್ರಾರ್ಥಿಗಳ ರಕ್ಷಣೆಗಾಗಿ ನೇಪಾಳ ಸೇನಾ ಹೆಲಿಕಾಪ್ಟರ್ ಗಳ ನೆರವು ಕೇಳಲಾಗಿದೆ.ಯಾತ್ರಾರ್ಥಿಗಳಿಗೆ ಸಹಾಯಕವಾಗಲೆಂದು ಸಹಾಯವಾಣಿಗಳನ್ನು ರೂಪಿಸಲಾಗಿದ್ದು, ಯಾತ್ರಿಕರು ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳ ಭಾಷೆಗಳಲ್ಲಿ ಮಾಹಿತಿಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ.
ಸಂಕಷ್ಟದಲ್ಲಿರುವ ಕನ್ನಡಿಗ ಯಾತ್ರಾರ್ಥಿಗಳು ಯೋಗಾನಂದ ಎಂಬುವವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಸಂಖ್ಯೆ: +977-9823672371
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos