ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣೆ ಪರ ಎಸ್ ಪಿ, ಟಿಆರ್ ಎಸ್ ಒಲವು
ನವದೆಹಲಿ: ಏಕಕಾಲಕ್ಕೆ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ನಡೆಸುವುದರ ಪರವಾಗಿ ಸಮಾಜವಾದಿ ಪಕ್ಷ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷಗಳು ಒಲವು ವ್ಯಕ್ತಪಡಿಸಿವೆ.
ಲೋಕಸಭೆ, ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್, 2019 ರಿಂದಲೇ ಈ ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ. ಕಾನೂನು ಆಯೋಗ ನಡೆಸಿದ ಸಭೆಗೆ ಪಕ್ಷದ ನಿಲುವನ್ನು ತಿಳಿಸಿರುವ ರಾಮ್ ಗೋಪಾಲ್ ಯಾದವ್, 2019 ರಿಂದಲೇ ದೇಶದಲ್ಲಿ ಏಕಕಾಲಕ್ಕೆ ವಿಧಾನಸಭೆ ಲೋಕಸಭೆಗೆ ಚುನಾವಣೆ ನಡೆಯುವ ವ್ಯವಸ್ಥೆ ಜಾರಿಗೆ ಬರಬೇಕೆಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಮೈತ್ರಿ ಸರ್ಕಾರ ರಚನೆಯಾದರೆ ನಿರ್ದಿಷ್ಠ ಅವಧಿಗೆ ಅವು ಕಾರ್ಯ ನಿರ್ವಹಣೆ ಮಾಡುವಂತಾಗಬೇಕು, ಮೈತ್ರಿಗೆ ನೀಡಿರುವ ಬೆಂಬಲವನ್ನು ಶಾಸಕರು, ಸಂಸದರು ವಾಪಸ್ ಪಡೆಯುವುದಿದ್ದರೆ ಅದನ್ನು ಕೆಲವೇ ತಿಂಗಳಲ್ಲಿ ನಿರ್ಧರಿಸಲು ಸ್ಪೀಕರ್ ಬದ್ಧರಾಗಿರುವಂತಾಗಬೇಕು ಎಂದು ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.
ಇನ್ನು ಇದೇ ವೇಳೆ ಟಿಆರ್ ಎಸ್ ಸಹ ಏಕಕಾಲಕ್ಕೆ ಚುನಾವಣೆ ನಡೆಸುವುದರ ಪರವಾಗಿರುವುದಾಗಿ ಹೇಳಿದ್ದು, "ನಮ್ಮ ಪಕ್ಷದ ಅಧ್ಯಕ್ಷ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗಳನ್ನು ನಡೆಸುವುದರ ಪರವಾಗಿದ್ದಾರೆ, ಇದರಿಂದಾಗಿ ಚುನಾವಣೆ ವೇಳೆ ಉಂಟಾಗುವ ಹೆಚ್ಚುವರಿ ಹಣದ ಖರ್ಚನ್ನು ತಡೆಗಟ್ಟಬಹುದು, ಕೇಂದ್ರ, ರಾಜ್ಯ ಸರ್ಕಾರಗಳು ಏಕ ಕಾಲಕ್ಕೆ ಒಟ್ಟಿಗೆ ಯಾವುದೆ ಅಡಚಣೆ ಇಲ್ಲದೇ ಕಾರ್ಯನಿರ್ವಹಣೆ ಮಾಡಬಹುದು" ಎಂದು ಟಿಆರ್ ಎಸ್ ನ ನಾಯಕ ವಿನೋದ್ ಕುಮಾರ್ ಹೇಳಿದ್ದಾರೆ. ಎಸ್ ಪಿ, ಟಿಆರ್ ಎಸ್ ಏಕಕಾಲಕ್ಕೆ ಚುನಾವಣೆ ನಡೆಸುವುದರ ಪರವಾಗಿದ್ದರೆ, ಸಿಪಿಐ ಎಐಎಡಿಎಂಕೆ, ಗೋವಾ ಫಾರ್ವರ್ಡ್ ಪಕ್ಷ, ಟಿಎಂಸಿ ಈ ವ್ಯವಸ್ಥೆಯನ್ನು ವಿರೋಧಿಸಿದ್ದು, ಸಂವಿಧಾನಿಕ ವಿರೋಧಿ ವ್ಯವಸ್ಥೆಯಾಗಿದ್ದು, ಪ್ರಾದೇಶಿಕ ಹಿತಾಸಕ್ತಿಗೆ ಮಾರಕ ಎಂದು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics