ನವದೆಹಲಿ: ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಕೆಲವು ಸರ್ಕಾರಿ ಯೋಜನೆಗಳು ಮುಸ್ಲಿಮರಿಗೆ ತಲುಪುತ್ತಿಲ್ಲ ಎಂದು ಮಾಜಿ ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಅವರು ಗುರುವಾರ ಹೇಳಿದ್ದಾರೆ.
ಶಿಕ್ಷಣ ಅಥವಾ ಇತರೆ ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಅಗತ್ಯವಿರುವವರಿಗೆ ಸರ್ಕಾರಿ ಯೋಜನೆಗಳ ಮೂಲಕ ಸಹಾಯ ಮಾಡಬೇಕು. ಆದರೆ ಕೆಲ ಸರ್ಕಾರಿ ವರದಿಗಳ ಪ್ರಕಾರ, ಕೆಲ ಯೋಜನೆಗಳು ಮುಸ್ಲಿಮರಿಗೆ ತಲುಪುತ್ತಿಲ್ಲ ಎಂದು ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಮಾಜಿ ಉಪ ರಾಷ್ಟ್ರಪತಿ ಹೇಳಿದ್ದಾರೆ.
ದೇಶದಲ್ಲಿ ಶೇ.14.5ರಷ್ಟು ಮುಸ್ಲಿಮರಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ. ಮೂಲ ವಿಚಾರ ಏನಂದರೆ ಅವರೆಲ್ಲರೂ ಭಾರತೀಯ ನಾಗರಿಕರೇ. ಹೀಗಾಗಿ ಅವರಿಗೂ ಇತರೆ ನಾಗರಿಕರಿಗೆ ನೀಡಿದ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಬೇಕು. ಅವರು ವಿಭಿನ್ನ ಎಂದು ಯಾರೊ ಹೇಳಬಾರದು ಎಂದಿದ್ದಾರೆ.
ಇದೇ ವೇಳೆ ಸಾರ್ವಜನಿಕರಿಂದ ಆಗುತ್ತಿರುವ ಹಲ್ಲೆ ಮತ್ತು ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅನ್ಸಾರಿ, ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಸಾರ್ವಜನಿಕರ ಪ್ರತಿಕ್ರಿಯೆಯೇ ಎಲ್ಲವನ್ನೂ ಹೇಳುತ್ತದೆ ಎಂದರು.