ನವದೆಹಲಿ: ಗೋ ಸಂರಕ್ಷಣೆ ಮತ್ತು ವದಂತಿಗಳಿಗೆ ಕಿವಿಗೊಟ್ಟು ಅಮಾಯಕರ ಮೇಲೆ ನಡೆಯುತ್ತಿರುವ ಸಾಮೂಹಿಕ ದಾಳಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಈ ಬಗ್ಗೆ ಇಂದು ನಡೆದ ವಿಚಾರಣೆಯಲ್ಲಿ ಉದ್ರಿಕ್ತರಿಂದ ಅಮಾಯಕರ ಮೇಲಿನ ದಾಳಿ ಪ್ರಕರಣಗಳು ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು, ಕಾನೂನು ಸುವ್ಯವಸ್ಥೆ ರಕ್ಷಣೆ ರಾಜ್ಯ ಸರ್ಕಾರಗಳ ಹೊಣೆ ಎಂದು ಹೇಳಿದೆ.
ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಭಯ ಮತ್ತು ಅರಾಜಕತೆ ಹೆಸರಲ್ಲಿ ಅಮಾಯಕರ ಮೇಲಿನ ದಾಳಿಯನ್ನು ಸಹಿಸಲಸಾಧ್ಯ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಇಂತಹ ಘಟನೆಗಳ ಕುರಿತು ರಾಜ್ಯ ಸರ್ಕಾರಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆ ರಾಜ್ಯ ಸರ್ಕಾರಗಳ ಹೊಣೆ. ಹೀಗಾಗಿ ಯಾವುದೇ ಕಾರಣಕ್ಕೂ ಹಿಂಸೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಸಂಸತ್ ಈ ಬಗ್ಗೆ ಹೊಸ ಕಾನೂನು ರಚಿಸುವ ಕುರಿತು ನಿರ್ಣಯ ಕೈಗೊಳ್ಳಬೇಕು ಕೇಂದ್ರಸರ್ಕಾರಕ್ಕೆ ಸುಪ್ರೀಂ ಕೋರ್ಚ್ ನಿರ್ದೇಶನ ನೀಡಿದೆ.
ಇನ್ನು ಇತ್ತೀಚೆಗೆ ದೇಶದ ವಿವಿಧೆಡೆ ಗೋ ಸಂರಕ್ಷಣೆ ಹೆಸರಲ್ಲಿ ಅಮಾಯಕರ ಮೇಲೆ ದಾಳಿಗಳಾಗುತ್ತಿದ್ದು, ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಮಕ್ಕಳ ಕಳ್ಳರ ವದಂತಿ ಹಿನ್ನಲೆಯಲ್ಲಿ ದೇಶದ ವಿವಿಧೆಡೆ ಅಮಾಕರ ಮೇಲೆ ಸಾಮೂಹಿಕ ದಾಳಿಗಳಾಗುತ್ತಿದ್ದು, ಕಳೆದ ಶುಕ್ರವಾರ ಬೀದರ್ ನಲ್ಲಿ ಮಕ್ಕಳಿಗೆ ಚಾಕೊಲೇಟ್ ನೀಡುತ್ತಿದ್ದ ಹೈದರಾಬಾದ್ ಮೂಲದ ಟೆಕ್ಕಿಯನ್ನು ಸ್ಥಳೀಯರು ಮಕ್ಕಳ ಕಳ್ಳರು ಎಂದು ಶಂಕಿಸಿ ಹೊಡೆದು ಕೊಂದು ಹಾಕಿದ್ದರು.